ADVERTISEMENT

ಗುಸುಗುಸು | ಮತ್ತದೇ ‘ಹುಲಿ’ ಬಂದ್ರೆ ಏನ್ ಗತಿ?

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 23:34 IST
Last Updated 22 ಮಾರ್ಚ್ 2024, 23:34 IST
<div class="paragraphs"><p>ಅನಂತಕುಮಾರ ಹೆಗಡೆ</p></div>

ಅನಂತಕುಮಾರ ಹೆಗಡೆ

   

ಉತ್ತರ ಕನ್ನಡ ಲೋಕಸಭೆ ಕ್ಷೇತ್ರವನ್ನು ಸತತವಾಗಿ ಸಂಸತ್‍ನಲ್ಲಿ ಪ್ರತಿನಿಧಿಸುತ್ತಿರುವ ಅನಂತಕುಮಾರ ಹೆಗಡೆ ಅವರಿಗೆ ‘ಹಿಂದೂ ಹುಲಿ’ ಎಂಬುದು ಅವರ ಬೆಂಬಲಿಗರು ನೀಡಿರುವ ಬಿರುದು! ಕಾಡಿನ ಹುಲಿಯಂತೆ ಈ ‘ಹುಲಿ’ಯೂ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಅಪರೂಪ ಎಂಬುದು ಅವರ ವಿರೋಧಿಗಳ ಟೀಕೆ.

ಅದೇನೆ ಇರಲಿ, ಈ ಸಲದ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಲ್ಲೂ ಕ್ಷೇತ್ರದಲ್ಲಿ ಮತ್ತದೇ ‘ಹುಲಿ’ ಚರ್ಚೆಯಲ್ಲಿದೆ. ಬಿಜೆಪಿ ಅಭ್ಯರ್ಥಿಗಳಾಗಲು ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಅವರಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಹೀಗೆ ಹಲವು ಆಕಾಂಕ್ಷಿಗಳು ಇದ್ದರು. ಅವರೆಲ್ಲರೂ ತಮ್ಮದೇ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದೂ ಆಗಿತ್ತು. ಭರ್ಜರಿ ಸಿದ್ಧತೆ ನಡೆದಿತ್ತು.

ADVERTISEMENT

‘ಅನಂತಕುಮಾರ ಹೆಗಡೆ ಹೇಗಿದ್ದರೂ ಕ್ಷೇತ್ರದಲ್ಲಿ ಜನರ ಎದುರು ಬರುವುದು ಅಪರೂಪ. ಈ ಸಲವಂತೂ ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿರಬಹುದು. ಅವರು ಹೊರಬಂದರೂ ಹೈಕಮಾಂಡ್ ಅವರಿಗೆ ಸೊಪ್ಪು ಹಾಕುವುದು ಅನುಮಾನ. ಹೀಗಾಗಿ ನಾವೇ ಒಂದು ಕೈ ನೋಡಿಬಿಡೋಣ’ ಎಂದು ಆಕಾಂಕ್ಷಿಗಳು ಊರೂರು ಸುತ್ತಿ ಕಾರ್ಯಕರ್ತರನ್ನೆಲ್ಲ ಮಾತನಾಡಿಸಿ ಬಂದು ವಿಶ್ರಾಂತಿಗೆ ಕುಳಿತಾಗಲೇ ಅವರಿಗೆ ‘ಹುಲಿ ಗುಹೆಯಿಂದ ಹೊರಬಿದ್ದಿದೆ’ ಎಂಬ ಸುದ್ದಿ ತಲುಪಿತ್ತು.

ಹುಲಿ ಗುಹೆಯಿಂದ ಹೊರಬಂದು ಗರ್ಜಿಸುತ್ತ ಅಲ್ಲಲ್ಲಿ ಓಡಾಡಿದ್ದೇ ತಡ ಕೆಲವು ಆಕಾಂಕ್ಷಿಗಳು ಪಕ್ಕಕ್ಕೆ ಸರಿದರು. ಮತ್ತೆ ಕೆಲವರು ಹುಲಿ ಸುಮ್ಮನಾಗಿಸಲು ದೆಹಲಿ, ನಾಗ್ಪುರ ಓಡಾಡಿ ಬಂದರು. ಈಗ ಕೆಲವು ದಿನದಿಂದ ಹುಲಿ ಮತ್ತೆ ಸುಮ್ಮನಾಗಿದೆ. ಮತ್ತದೇ ಹುಲಿ ನಿಂತರೆ ಐದು ವರ್ಷ ನಮ್ಮ ಗತಿ ಏನು? ಎಂಬುದು ಕ್ಷೇತ್ರದ ಜನರ ಗುಸುಗುಸು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.