ADVERTISEMENT

ಫರೂಖಾಬಾದ್‌: ಖುರ್ಷಿದ್‌ ಹಾದಿ ಕಠಿಣ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 19:30 IST
Last Updated 21 ಏಪ್ರಿಲ್ 2014, 19:30 IST
ಸಲ್ಮಾನ್‌ ಖುರ್ಷಿದ್‌
ಸಲ್ಮಾನ್‌ ಖುರ್ಷಿದ್‌   

ಫರೂಖಾಬಾದ್: ‘ಆಕಾಶದಲ್ಲಿ ಹಾರು­ವ­ವರಿಗೆ ನೆಲವೆಲ್ಲಿ ಕಾಣಬೇಕು?’ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರ ಫರೂಖಾಬಾದ್‌ ಲೋಕಸಭಾ ಕ್ಷೇತ್ರದ ಮತದಾರರು ಕೇಳುವ ಪ್ರಶ್ನೆಯಿದು. ಕೇಂದ್ರ ಸರ್ಕಾರ­ದಲ್ಲಿ ಮಹತ್ವದ ಖಾತೆ ಹೊಂದಿರುವ ಖುರ್ಷಿದ್‌ ತಮ್ಮ ಕ್ಷೇತ್ರವನ್ನು ಕಡೆಗಣಿ­ಸಿ­ದ್ದಾ­ರೆಂದು ಹೇಳಲು ಈ ಪರಿಭಾಷೆ ಬಳಸುತ್ತಿದ್ದಾರೆ. ವಿದೇಶಾಂಗ ಸಚಿವರ ಸ್ಪರ್ಧೆಯಿಂದಾಗಿ ಫರೂಖಾಬಾದ್‌ ಅತಿ ಪ್ರಾಮುಖ್ಯ  ಪಡೆದುಕೊಂಡಿದೆ.

ಬೇರೆ ಬೇರೆ ದೇಶಗಳ ಜತೆಗಿನ ಸಂಬಂಧ ಸುಧಾರಿಸುವ ಕೆಲಸದಲ್ಲಿ ಸಲ್ಮಾನ್‌ ಖುರ್ಷಿದ್‌ ಬಿಡುವಿಲ್ಲದೆ ತೊಡ­ಗಿ­ಸಿಕೊಂಡಿದ್ದರಿಂದ ಫರೂಖಾ­ಬಾದ್‌ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿಲ್ಲ ಎಂದು ಜನ ವ್ಯಂಗ್ಯವಾಡು­ತ್ತಾರೆ. ಅವರು ಏನೂ ಕೆಲಸ ಮಾಡಿಲ್ಲ­ವೆಂಬ ಅಸಮಾಧಾ­ನವಿದ್ದರೂ, ವ್ಯಕ್ತಿಗತ­ವಾಗಿ ಟೀಕಿಸು­ವುದಿಲ್ಲ. ‘ಮಿನಿಸ್ಟರ್‌ ಸಾಬ್‌­ ­ಷರೀಫ್‌ ಆದ್ಮಿ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪಶ್ಚಿಮ ಮತ್ತು ಮಧ್ಯಮ ಉತ್ತಮ ಪ್ರದೇಶದ ಉಳಿದ ಲೋಕಸಭಾ ಕ್ಷೇತ್ರ­ಗಳಂತೆ ಫರೂಖಾಬಾದ್‌ನಲ್ಲೂ ರಸ್ತೆ­ಗಳು ಹದಗೆಟ್ಟಿವೆ. ಕೇಂದ್ರ ಬಸ್‌ ನಿಲ್ದಾ­ಣಕ್ಕೆ ಹೋಗುವ ಮುಖ್ಯ ರಸ್ತೆ­ಯೊಂದನ್ನು ಬಿಟ್ಟರೆ ಎಲ್ಲ ರಸ್ತೆಗಳು ಹಾಳಾಗಿವೆ. ಪ್ರತಿನಿತ್ಯ ನೂರಾರು ಬಸ್ಸು­ಗಳು ಬಂದು, ಹೋಗುವ ನಿಲ್ದಾಣ ಕಳಪೆಯಾಗಿದೆ. ತೀವ್ರ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ. ಇದು ವಿದೇಶಾಂಗ ಸಚಿವರ ಕ್ಷೇತ್ರವೇ ಎಂದು ಅನುಮಾನ ಹುಟ್ಟಿಸು­ವಷ್ಟು ಫರೂಖಾಬಾದ್‌ ಹಿಂದುಳಿದಿದೆ.

ಫರೂಖಾಬಾದಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ನಡೆ­ಯು­ವಂತೆ ಕಾಣುತ್ತಿದೆ. ಅಲ್ಪ­ಸಂಖ್ಯಾತ ಸಮುದಾಯದಿಂದ ಸಲ್ಮಾನ್‌ ಮಾತ್ರ ಕಣದಲ್ಲಿ ಇರುವುದರಿಂದ ಇಡೀ ಸಮು­ದಾಯ ಅವರ ಬೆನ್ನಿಗಿದೆ. ಬಿಜೆಪಿ, ಎಸ್‌ಪಿ ಮತ್ತು ಬಿಎಸ್‌ಪಿ ಹಿಂದುಗಳನ್ನು ಕಣಕ್ಕಿಳಿಸಿವೆ. ಎಸ್‌ಪಿ ಬಂಡಾಯ ಎದುರಿ­ಸುತ್ತಿದೆ. ಬಿಜೆಪಿ ಹಿಂದೂಗಳನ್ನು ಸಂಘಟಿ­ಸುತ್ತಿದೆ. ಸದ್ದುಗದ್ದಲವಿಲ್ಲದೆ ಪ್ರಚಾರ ಮಾಡುತ್ತಿರುವ ಬಿಎಸ್‌ಪಿ ಗುಟ್ಟು ಬಿಡದೆ ಗುಮ್ಮನಂತಿದೆ.

‘ಮಾಜಿ ಮುಖ್ಯಮಂತ್ರಿ ಕಲ್ಯಾಣ್‌­ಸಿಂಗ್‌ ಅವರ ಒತ್ತಡಕ್ಕೆ ಕಟ್ಟು ಬಿದ್ದು ಮುಕೇಶ್‌ ರಜಪೂತ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಅವರು ಪ್ರಬಲ ಸ್ಪರ್ಧಿ­ಯಲ್ಲ. ಸುರೇಂದ್ರ ದುಬೆ ಟಿಕೆಟ್‌ ಆಕಾಂಕ್ಷಿ­ಯಾಗಿ­ದ್ದರು. ಅವರಿಗೆ ಟಿಕೆಟ್‌ ಕೊಟ್ಟಿ­ದ್ದರೆ ಇನ್ನೂ ಪ್ರಬಲ ಪೈಪೋಟಿ ನಡೆ­ಯು­ತ್ತಿತ್ತು. ಅಭ್ಯರ್ಥಿ ಕಾರಣಕ್ಕೆ ದುರ್ಬಲ ಆಗಿರುವಂತೆ ಕಾಣುವ ಬಿಜೆಪಿಗೆ ‘ನಮೋ ಮಂತ್ರ’ ನೆರವಿಗೆ ಬಂದರೆ ಗೆಲುವು ಸುಲಭ­ವಾ­ಗಬಹುದು’ ಎಂದು ಜಮ್ಮಾ ಪುರದ ನರೇಂದ್ರ ಅವಸ್ತಿ’ ಫರೂಖಾ­ಬಾದ್‌ ಚುನಾವಣೆಯ ಸ್ಥೂಲ ಚಿತ್ರಣ ಕೊಡುತ್ತಾರೆ.

‘ಸಲ್ಮಾನ್ ಕಟ್ಟಾ ಇಸ್ಲಾಂ ವಾದಿ­ಯಲ್ಲ. ಹೀಗಾಗಿ ಅವರಿಗೆ ಹಿಂದೂ ಅದ­ರಲ್ಲೂ ಕೆಲವು ಬ್ರಾಹ್ಮಣರ ಮತಗಳು ಬರಬಹುದು ಎಂದು ವಿಶ್ಲೇಷಣೆ ಮಾಡುತ್ತಾರೆ. ಆದರೆ, ಫರೂಖಾ­ಬಾದ್‌ ಹಿಂದುಸ್ತಾನ್‌ ಹೋಟೆಲ್‌ ಮಾಲೀಕ ದಿಲೀಪ್‌, ಅವಸ್ತೆ ಅವರ ಮಾತನ್ನು ಅಲ್ಲಗೆಳೆಯುತ್ತಾರೆ. ಫರೂ­ಖಾ­ಬಾದ್‌ನಲ್ಲಿ ಹಿಂದು ಮತ್ತು ಮುಸ್ಲಿ­ಮರು ಎರಡು ಭಾಗವಾಗಿದ್ದಾರೆ. ವಿದೇಶಾಂಗ ಸಚಿವರನ್ನು ಸೋಲಿಸಬೇಕು ಎನ್ನುವ ಭಾವನೆ ಹಿಂದುಗಳಲ್ಲಿ ಬಂದಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ. ದಿಲೀಪ್‌ ಮಾತಿಗೆ ಕೇಂದ್ರ ಬಸ್‌ ನಿಲ್ದಾಣದ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಆನಂದ್‌ ಕೂಡಾ ದನಿಗೂಡಿಸುತ್ತಾರೆ.

ಫರೂಖಾಬಾದಿನಲ್ಲಿ ಯಾದವರು ಮತ್ತು ಲೋಧರು ಪ್ರಬಲವಾಗಿದ್ದಾರೆ. ಮೈನ್‌ಪುರಿ, ಕನೌಜ್‌, ಬದಾಯು ಕ್ಷೇತ್ರ­ಗಳಿಂದ ಸುತ್ತುವರಿದಿದೆ. ಇವು ಸಮಾಜ­ವಾದಿ ಪಕ್ಷ  ಪ್ರಾಬಲ್ಯವಿರುವ ಕ್ಷೇತ್ರಗಳು. ಮೈನ್‌ಪುರಿ ಮುಲಾಯಂ, ಕನೌಜ್‌ ಅಖಿಲೇಶ್‌ ಪತ್ನಿ ಡಿಂಪಲ್‌ ಯಾದವ್‌, ಬದಾಯು ಮಾಜಿ ಮುಖ್ಯಮಂತ್ರಿ ಹತ್ತಿರದ ಸಂಬಂಧಿ ಧರ್ಮೇಂದ್ರ ಯಾದವ್‌ ಅವರಿಗೆ ಕ್ಷೇತ್ರ.

ಆದರೆ, ಫರೂಖಾಬಾದ್‌ನಲ್ಲಿ ಯಾದವ ಸಮುದಾಯ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿ ಮತ್ತು ಬಂಡಾಯ ಅಭ್ಯರ್ಥಿ ನಡುವೆ ಹಂಚಿ­ಹೋಗಿದೆ. ಬಂಡಾಯ ಅಭ್ಯರ್ಥಿ ಹಾಲಿ ಶಾಸಕ ನರೇಂದ್ರ ಸಿಂಗ್‌ ಯಾದವ್ ಅವರ ಪುತ್ರ. ಪುತ್ರನಿಂದಾಗಿ ಅಪ್ಪನ ಮಂತ್ರಿ ಸ್ಥಾನಕ್ಕೆ ಕತ್ತರಿ ಬಿದ್ದಿದೆ. ಅಖಿಲೇಶ್‌ ಯಾದವ್‌, ತಮ್ಮ ಸಂಪುಟ­ದಿಂದ ನರೇಂದ್ರ ಸಿಂಗ್‌ ಅವರನ್ನು ಕಿತ್ತು ಹಾಕಿದ್ದಾರೆ.

ಹಣ ದುರುಪಯೋಗ ಆರೋಪ: ಸಲ್ಮಾನ್‌ ಹಾಗೂ ಅವರ ಪತ್ನಿ ಲೂಸಿ ಖುರ್ಷಿದ್‌ ನಡೆಸುತ್ತಿರುವ ಜಾಕಿರ್‌ ಹುಸೇನ್‌ ಟ್ರಸ್ಟ್‌ ಅವ್ಯವಹಾರ ಆರೋಪ­ದಲ್ಲಿ ಸಿಕ್ಕಿಕೊಂಡಿದೆ. ಅಂಗವಿಕಲರಿಗೆ ತ್ರಿಚಕ್ರ ಸೈಕಲ್‌ ಕೊಡುವ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಅವರ ಮೇಲಿದೆ. ಇತ್ತೀಚೆಗೆ ಕೇಳಿ ಬಂದಿರುವ ಆರೋಪವನ್ನು ಲೂಸಿ ನಿರಾಕರಿಸಿದ್ದಾರೆ.

ಟ್ರಸ್ಟ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಖಚಿತ­ಪಡಿಸಿದ್ದಾರೆ. ಖುರ್ಷಿದ್‌ ದಂಪತಿ ಮೇಲೆ ಬಂದಿ­ರುವ ಅವ್ಯವಹಾರ ಆರೋಪ ಚುನಾ­ವಣೆ ಮೇಲೆ ಯಾವುದೇ ಪರಿ­ಣಾಮ ಬೀರುವುದಿಲ್ಲ. ಯಾವ ಆರೋ­ಪಕ್ಕೂ ಕಿವಿಗೊಡದೆ ನಾವು ಸಲ್ಮಾನ್‌ ಅವರಿಗೆ ಮತ ಹಾಕುತ್ತೇವೆ ಎಂದು ತಳ್ಳುವ ಗಾಡಿ ಮೇಲೆ ಬೀಡಿ ಅಂಗಡಿ ಇಟ್ಟುಕೊಂಡಿರುವ 70 ವರ್ಷದ ಹಿರಿಯ ಮೊಹಮ್ಮದ್‌ ಯಾಸಿನ್‌ ಹೇಳುತ್ತಾರೆ.

ವಿದೇಶಾಂಗ ಸಚಿವರು ಏನೂ ಕೆಲಸ ಮಾಡಿಲ್ಲ ಎಂದು ನಮಗೆ ಚೆನ್ನಾಗಿ ಗೊತ್ತಿದೆ. ಆದರೂ ಅವರನ್ನು ಬೆಂಬಲಿ­ಸದೆ ಬೇರೆ ದಾರಿ ಇಲ್ಲ ಎಂದು ಪ್ರತಿ­ಪಾದಿಸುತ್ತಾರೆ. ಹೆಚ್ಚು ಕಡಿಮೆ ಯಾದ ವರಷ್ಟೇ ಪ್ರಮಾ­ಣ­­ದಲ್ಲಿರುವ ಲೋಧರು ಬಿಜೆಪಿಗೆ ಬೆಂಬಲ ವಾಗಿದ್ದಾರೆ. ಬ್ರಾಹ್ಮ­ಣರು, ಠಾಕೂರರು ಗಣನೀಯ ಸಂಖ್ಯೆ­ಯಲ್ಲಿದ್ದಾರೆ. 2009ರ ಚುನಾವಣೆ­ಯಲ್ಲಿ ಸಲ್ಮಾನ್‌ ಖುರ್ಷಿದ್‌ ಇದೇ ಕ್ಷೇತ್ರದಿಂದ ಲೋಕ­ಸಭೆಗೆ ಚುನಾಯಿ­ತರಾಗಿದ್ದರು. ಅವರ ಪತ್ನಿ ಲೂಸಿ ಕಳೆದ ವಿಧಾನಸಭೆ ಚುನಾ­ವಣೆಯಲ್ಲಿ ಸಾದರ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿ­ದ್ದಾರೆ. ಲೋಕಸಭೆ ಚುನಾವಣೆ ಸಲ್ಮಾನ್‌ ಅವರಿಗೂ ಕಠಿಣದ ಹಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.