ADVERTISEMENT

ದೇವೇಗೌಡರ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸುವೆ, ನನಗೂ ಮಾತನಾಡುವುದು ಗೊತ್ತಿದೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 6:16 IST
Last Updated 26 ಜನವರಿ 2018, 6:16 IST
ಎ.ಮಂಜು
ಎ.ಮಂಜು   

ಹಾಸನ: ತಮ್ಮ ವಿರುದ್ಧ ಸಂಸದ ಎಚ್. ಡಿ.ದೇವೇಗೌಡ ಮಾಡಿರುವ ಆರೋಪಕ್ಕೆ ಬೆಂಗಳೂರಲ್ಲೇ ಪತ್ರಿಕಾಗೋಷ್ಠಿ ಕರೆದು ಉತ್ತರ ಕೊಡುವೆ.  ಮಸ್ತಕಾಭಿಷೇಕ ಕಾಮಗಾರಿಯಲ್ಲಿ ನಾನು ಕಮೀಷನ್ ಪಡೆದಿರುವ ಆರೋಪ, ಕಾಮಗಾರಿಯ ಎಲ್ಲಾ ದಾಖಲೆ ಬಿಡುಗಡೆ ಮಾಡುವೆ. 2006ರ ಮಸ್ತಕಾಭಿಷೇಕ ಕಾಮಗಾರಿ ದಾಖಲೆಯನ್ನು ಅವರು ಬಿಡುಗಡೆ ಮಾಡಲಿ ಎಂದು ಸಚಿವ ಎ.ಮಂಜು ಸವಾಲು ಹಾಕಿದ್ದಾರೆ.

ಮಾಜಿ ಪ್ರಧಾನಿ ಆರೋಪ ನನಗೆ ಅತೀವ ನೋವು ತಂದಿದೆ. ಪತ್ರಿಕಾಗೋಷ್ಠಿಯಲ್ಲಿ ನಾನು ನಡೆದು ಬಂದ ದಾರಿ, ಹಿನ್ನೆಲೆ ಎಲ್ಲಾ ಹೇಳುವೆ. ಚುನಾವಣೆ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ನಾನು ರಾಜಕೀಯದಲ್ಲಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲಿಲ್ಲ. ಅನಾಗರಿಕನಾಗಿ ನಾನು ಮಾತನಾಡಿಲ್ಲ. ಅವರಂತೆ ಛಿ, ಥೂ ಅಂತ ಮಾತನಾಡಿಲ್ಲ. ಇದು ದೇಶಕ್ಕೆ, ಮತದಾರರಿಗೆ ನಾಚಿಗೇಡಿನ ವಿಷಯ. ದೇವೇಗೌಡರು ಬಾರದೇ ಹೋದ್ರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ?  ದೇವೇಗೌಡರು ಈ ರೀತಿ ಮಾತಾಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ತಿರುಗೇಟು ನೀಡಿದ ಸಚಿವರು, ಡಿಸಿ ವರ್ಗ ವಿಚಾರದಲ್ಲಿ ಗೌಡರು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿ ಸರ್ಕಾರದ ಸೇವಕರು. ಹುದ್ದೆ ಮುಖ್ಯವಲ್ಲ, ಕಾರ್ಯ ನಿರ್ವಹಣೆ ಮುಖ್ಯ ಎಂದಿದ್ದಾರೆ.

ದೇವೇಗೌಡರು ಮಾಡಿದ ಆರೋಪ ಏನು?
‘ಶ್ರವಣಬೆಳಗೊಳದಲ್ಲಿ ಅಟ್ಟಣಿಗೆ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದ ಮುಖ್ಯಮಂತ್ರಿ, ಸಚಿವ ಎ.ಮಂಜು ಮೇಲಿಂದ ಮೇಲೆ ಪತ್ರ ಬರೆದ ಮೇಲೆ ಕೆಆರ್‌ಡಿಸಿಎಲ್‌ಗೆ ಹಸ್ತಾಂತರ ಮಾಡಿದರು. ಎ.ಮಂಜು ಅವರನ್ನು ಏಜೆಂಟ್‌ ಆಗಿ ಇಟ್ಟುಕೊಂಡಿದ್ದರಾ? ಎಲ್ಲದರಲ್ಲೂ ಹಣ ತಿಂದರೆ ಅಜೀರ್ಣವಾಗುವುದಿಲ್ಲವೇ’
ಚುನಾವಣೆ ಸಿದ್ಧತಾ ಕಾರ್ಯ ನಡೆಯುತ್ತಿರುವಾಗ ಚುನಾವಣಾ ಆಯೋಗದ ನಿರ್ದೇಶನ ಉಲ್ಲಂಘನೆ ಮಾಡಿ ರೋಹಿಣಿ ಅವರನ್ನು ವರ್ಗ ಮಾಡಿದ್ದು ಏಕೆ? ನ್ಯಾಯಸಮ್ಮತ ಚುನಾವಣೆ ನಡೆಸುತ್ತೇನೆ ಎಂದು ನಾಡಿನ ಜನರ ಮುಂದೆ ಹೇಳುವ ಆತ್ಮಸಾಕ್ಷಿ ಮುಖ್ಯಮಂತ್ರಿಗೆ ಇದೆಯೇ. ಇದ್ದರೆ ಹೇಳಲಿ’ ಎಂದು ಸಂಸದ ಎಚ್.ಡಿ.ದೇವೇಗೌಡ ಸವಾಲೆಸೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.