ADVERTISEMENT

ಹಿಂದುತ್ವದ ರಾಜಕೀಯ ದೇಶಕ್ಕೆ ಅಪಾಯಕಾರಿ: ಎಂ.ಎಸ್.ಜಯಕುಮಾರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 11:39 IST
Last Updated 13 ಏಪ್ರಿಲ್ 2019, 11:39 IST

ರಾಯಚೂರು: ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ದೇಶದ ಸಮಗ್ರತೆ ಹಾಗೂ ಭಾತೃತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಸಿಪಿಐ (ಎಂಎಲ್) ರೆಡ್‌ಫ್ಲ್ಯಾಗ್ ಅಖಿಲ ಭಾರತ ಕಾರ್ಯದರ್ಶಿ ಎಂ.ಎಸ್.ಜಯಕುಮಾರ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮ್ರಾಜ್ಯಶಾಹಿ, ಕೋಮುವಾದ ಪ್ರತಿಪಾದಿಸುವ ಮೂಲಕ ಬಿಜೆಪಿ ದೇಶದ ಏಕತೆ ಹಾಳು ಮಾಡುತ್ತಿದೆ. ಸಂಘ ಪರಿವಾರವು ರಾಷ್ಟ್ರೀಯತೆ, ದೇಶಪ್ರೇಮದ ಬಗ್ಗೆ ಹೇಳುತ್ತವೆ. ಆದರೆ, ಬಿಜೆಪಿ ಕಾಶ್ಮೀರಕ್ಕೆ ನೀಡಿರುವ 370 ಕಾಯ್ದೆಯ ವಿಶೇಷ ಸ್ಥಾನಮಾನ ರದ್ದುಪಡಿಸುವ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ ಹೊಸ ಸಮಸ್ಯೆ ಸೃಷ್ಟಿಸಲು ಹೊರಟಿದೆ ಎಂದು ದೂರಿದರು.

ರಾಮಮಂದಿರ ನಿರ್ಮಾಣಕ್ಕೆ ಬದ್ಧವೆಂದು ಪುನರುಚ್ಚರಿಸಿ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿಯುವ ಹುನ್ನಾರಕ್ಕೆ ಅಂಟಿಕೊಂಡಿದೆ. ಶೋಷಿತ ಸಮುದಾಯಗಳಿಗೆ ಸಮರ್ಪಕವಾಗಿ ಮೀಸಲಾತಿ ನೀಡದೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡುತ್ತಿರುವುದು ಮೀಸಲಾತಿ ಅರ್ಥಕ್ಕೆ ವಿರುದ್ಧವಾಗಿದೆ ಎಂದರು.

ADVERTISEMENT

ಮೃದು ಹಿಂದುತ್ವದ ವಿಚಾರಗಳನ್ನು ಪ್ರತಿಪಾದಿಸುವ ಕಾಂಗ್ರೆಸ್‌ ಹಾಗೂ ಬಿಜೆಪಿ ನೀತಿಗಳು ಭಿನ್ನವಾಗಿಲ್ಲ. ಜನರು ಮತ ನೀಡುವಾಗ ಜಾಗೂರುಕತೆ ವಹಿಸಬೇಕು. ದೇಶದಲ್ಲಿ ಎಡ ಪರ್ಯಾಯದ ಅಗತ್ಯವಿದೆ. ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಬಿ.ಬಸವಲಿಂಗಪ್ಪಗೆ ಮತ ನೀಡಿ ಬೆಂಬಲಿಸಬೇಕು ಎಂದು ತಿಳಿಸಿದರು.

ಯಲ್ಲಪ್ಪ, ಸ್ವಾಮಿದಾಸ, ಜಯಪ್ರಕಾಶಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.