ADVERTISEMENT

ಮುಂದಿನ ಚುನಾವಣೆಗೂ ಸ್ಪರ್ಧಿಸುವೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:25 IST
Last Updated 20 ಮಾರ್ಚ್ 2019, 20:25 IST
ಸಂವಾದದಲ್ಲಿ ಭಾಗವಹಿಸಿದ್ದ ಬಿ.ಎಸ್‌. ಯಡಿಯೂರಪ್ಪ –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಭಾಗವಹಿಸಿದ್ದ ಬಿ.ಎಸ್‌. ಯಡಿಯೂರಪ್ಪ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೌದು, ನನಗೀಗ 76 ವರ್ಷ. ಆದರೆ, ನನ್ನ ಕೈ–ಕಾಲುಗಳು ಇನ್ನೂ ಗಟ್ಟಿಯಾಗಿವೆ. ಮುಂದಿನ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತೇನೆ. ಈ ವಿಷಯವನ್ನು ನಿಮ್ಮ ಮೂಲಕ ರಾಜ್ಯದ ಜನರಿಗೂ ತಿಳಿಸಲು ಬಯಸುತ್ತೇನೆ’

‘ರಾಜಕಾರಣಿಗಳಿಗೆ 75 ವರ್ಷಗಳಾದ ಬಳಿಕ ನಿವೃತ್ತಿ ಬೇಕು ಎನ್ನುವ ಜನಾಭಿಪ್ರಾಯ ಇದೆ. ನಿಮಗೂ ವಯಸ್ಸಾಯ್ತಲ್ಲ’ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕೊಟ್ಟ ನೇರ ಉತ್ತರವಿದು.

‘ಪ್ರಜಾವಾಣಿ’ ಹಾಗೂ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಿಂದ ಬುಧವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡ ಅವರು, ‘ರಾಜಕಾರಣಕ್ಕೆ ವಯಸ್ಸೇನೂ ಭಾರವಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

‘ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸೂ ಇದೆಯೇ’ ಎಂದು ಕೆಣಕಿದಾಗ, ‘ಮುಖ್ಯಮಂತ್ರಿ ಆಗುವೆನೋ ಇಲ್ಲವೋ ಚುನಾವಣೆಗಂತೂ ಸ್ಪರ್ಧಿಸುವೆ. ಜನರ ಆಶೀರ್ವಾದ ಸಿಕ್ಕರೆ ಆ ಹುದ್ದೆಗೂ ಏರುತ್ತೇನೆ’ ಎಂದು ಉತ್ತರಿಸಿದರು.

‘ವಯಸ್ಸು 75, 76, 77 ಎಷ್ಟೇ ಆಗಿರಲಿ, ಆ ಅನುಭವ ದೇಶದ ಹಿತಕ್ಕೆ ಬಳಕೆಯಾಗುತ್ತದೆ’ ಎಂದರು.

‘ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡಿದರೇ’ ಎಂಬ ಪ್ರಶ್ನೆ ಯಡಿಯೂರಪ್ಪ ಅವರನ್ನು ತುಸು ಕೆರಳಿಸಿತು.

‘ಈ ಜನ್ಮದಲ್ಲಿ ಅಂತಹ ಕೆಲಸ ಮಾಡುವುದಿಲ್ಲ. ಯಾವ ರಾಜ್ಯಕ್ಕೂ ರಾಜ್ಯಪಾಲನಾಗಿ ಹೋಗುವುದಿಲ್ಲ. ರಾಜ್ಯದ ಅಭಿವೃದ್ಧಿಯೇ ನನಗೆ ಮುಖ್ಯ. ಇಲ್ಲಿಯೇ ಇದ್ದು ರೈತರ ಪರಹೋರಾಡುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.