ADVERTISEMENT

ಅಮರ್‌ ಸಿಂಗ್‌, ಜಯಪ್ರದಾ ಆರ್‌ಎಲ್‌ಡಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಹಲವು ತಿಂಗಳುಗಳ ವದಂತಿಗಳಿಗೆ ಕೊನೆಗೂ ತೆರೆ ಎಳೆದಿರುವ ಸಮಾಜವಾದಿ ಪಕ್ಷದ ಉಚ್ಚಾಟಿತ ಮುಖಂಡರಾದ ಅಮರ್‌ ಸಿಂಗ್‌ ಹಾಗೂ ಜಯಪ್ರದಾ ಅವರು ಸೋಮವಾರ ಅಜಿತ್‌ ಸಿಂಗ್‌ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಸೇರಿದರು.

ಅಮರ್‌ ಸಿಂಗ್‌ ಅವರು ಫತೇಪುರ ಕ್ಷೇತ್ರದಿಂದ, ಜಯಪ್ರದಾ ಅವರು ಬಿಜನೊರ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ್‌ ಸಿಂಗ್‌, ಚುನಾವಣಾ ರಾಜಕೀಯಕ್ಕಾಗಿ ತಾವು ಆರ್‌ಎಲ್‌ಡಿ ಸೇರಿಲ್ಲ ಎಂದು ಹೇಳಿದರು.

‘ನನ್ನ ಎರಡು ಮೂತ್ರಪಿಂಡಗಳು ನಿಷ್ಕ್ರಿಯಗೊಂಡ ಹೊರತಾಗಿಯೂ, ನಾನು ಮತ್ತು ಜಯಪ್ರದಾ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ 1,000 ಕಿ.ಮೀ ಪಾದಯಾತ್ರೆ ಮಾಡಿದ್ದೇವೆ’ ಎಂದು ಹೇಳಿದರು.

‘ಉತ್ತರ ಪ್ರದೇಶವನ್ನು ವಿಭಜನೆ ಮಾಡದೇ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಕಂಡು­ಕೊಂಡಿ­ದ್ದೇನೆ.  ಪೂರ್ವಾಂಚಲ, ಬುಂದೇಲ್‌­ಖಂಡ ಮತ್ತು ಹರಿತ್‌ ಪ್ರದೇಶ ರಚನೆಯ ಬಗ್ಗೆ ಅಜಿತ್‌ ಅವರಿಗೆ ಇರುವಷ್ಟು ಸ್ಪಷ್ಟತೆ ಇತರ ಪ್ರಮುಖ ಪಕ್ಷಗಳ ಮುಖಂಡರಿ­ಗಿಲ್ಲ’ ಎಂದೂ ಅವರು ಅಭಿಪ್ರಾಯ ಪಟ್ಟರು.

ಅಜಿತ್‌ ಅವರು ಯಾವಾಗಲೂ ತಮಗೆ ಬೆಂಬಲ ನೀಡುತ್ತಿದ್ದರು. ತಾವು ಹಾಗೂ ಅಮರ್‌ ಸಿಂಗ್‌ ಆರ್‌ಎಲ್‌ಡಿಯ ಬಲವರ್ಧನೆಗೆ ಅಗತ್ಯ­ವಾದ ಎಲ್ಲಾ ಪ್ರಯತ್ನಗಳನ್ನು ಮಾಡು­ವು­ದಾಗಿ ನಟಿ, ಸಂಸದೆ ಜಯಪ್ರದಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.