ADVERTISEMENT

ಎರಡು ಸುದ್ದಿ ವಾಹಿನಿಗಳ ವಿರುದ್ಧ ಜಿಂದಾಲ್‌ ದೂರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಸಂಸದ ಹಾಗೂ ಜಿಂದಾಲ್‌ ಸ್ಟೀಲ್‌ ಆಂಡ್‌ ಪವರ್‌ನ ಅಧ್ಯಕ್ಷ ನವೀನ್‌ ಜಿಂದಾಲ್‌ ಅವರು ಎರಡು ಸುದ್ದಿ ವಾಹಿನಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದ್ದಾರೆ.

ಒಂದೇ ಸಮೂಹಕ್ಕೆ ಸೇರಿದ ಎರಡೂ ವಾಹಿನಿಗಳು ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಜಿಂದಾಲ್‌ ಆಪಾದಿಸಿದ್ದಾರೆ.
‘ಚುನಾವಣಾ ನೀತಿ ಸಂಹಿತೆ ಜಾರಿಯಾದ, ಅಂದರೆ ಮಾರ್ಚ್‌ 5ರ ನಂತರ ಆ ವಾಹಿನಿಗಳು ನನ್ನ ವಿರುದ್ಧ 85 ಸುಳ್ಳು ಸುದ್ದಿಗಳನ್ನು ಪ್ರಕಟಿಸಿವೆ.

ನಾವು ಇಂದು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ಈ ದುರುದ್ದೇಶ ಪೂರಿತ ಪ್ರಚಾರವನ್ನು ತಡೆಯುವಂತೆ ಮನವಿ ಮಾಡಿದ್ದೇವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಜಿಂದಾಲ್‌ ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ಪರವಾಗಿ ಸುದ್ದಿ ಪ್ರಸಾರ ಮಾಡಲು ಈ ವಾಹಿನಿಗಳು ₨100 ಕೋಟಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದನ್ನು ತಾವು ಬಯಲಿಗೆಳೆದ ಬಳಿಕ, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡು­ತ್ತಿವೆ ಎಂದು ಹರಿಯಾಣದ ಕುರುಕ್ಷೇತ್ರ­ದಿಂದ ಪುನರಾಯ್ಕೆ ಬಯಸಿರುವ ನವೀನ್‌ ಜಿಂದಾಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT