ADVERTISEMENT

ಕಾಂಗ್ರೆಸ್‌ ಕಾರ್ಯತಂತ್ರ ಚರ್ಚೆ

ಯುಪಿಎ, ಎನ್‌ಡಿಎಗೆ ಬಹುಮತ ಬರದಿದ್ದರೆ ಮುಂದೇನು?

​ಪ್ರಜಾವಾಣಿ ವಾರ್ತೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರ ರಚಿಸಲು ಅಗತ್ಯ­ವಿ­ರುವಷ್ಟು ಸ್ಥಾನಗಳನ್ನು ಪಡೆ ಯಲು ಯುಪಿಎ ವಿಫಲವಾದರೆ ಕಾಂಗ್ರೆಸ್‌ನ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಅಕ್ಬರ್‌ ರಸ್ತೆಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ಯಾವುದೇ ರಾಜಕೀಯ ಚಟುವಟಿಕೆ ನಡೆಯ ದಿ­ದ್ದರೂ ಪಕ್ಷದ ಮುಖಂಡರು ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕೇಂದ್ರದಲ್ಲಿ ಒಂದು ವೇಳೆ ತೃತೀಯ ರಂಗ ಸರ್ಕಾರ ರಚಿಸಿದರೆ ಕಾಂಗ್ರೆಸ್‌ ಬೆಂಬಲ ನೀಡುವುದಿಲ್ಲ ಎಂದು ಕಳೆದ ತಿಂಗಳು ಅಮೇಠಿಯಲ್ಲಿ ನಡೆದ ಚುನಾ­ವಣಾ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ ಹೇಳಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.

ಎನ್‌ಡಿಎ ಬಹುಮತ ಪಡೆಯದಿದ್ದರೆ ಕಾಂಗ್ರೆಸ್‌ ಮುಂದೆ ಏನೆಲ್ಲಾ ಸಾಧ್ಯತೆ­ಗಳಿವೆ  ಎಂಬ ಕುರಿತು ಚರ್ಚಿಸುತ್ತಿ­ರು­ವು­ದಾಗಿ ಪಕ್ಷದ ವಕ್ತಾರರೊಬ್ಬರು ತಿಳಿಸಿದ್ದಾರೆ.  ‘ಸಮೀಕ್ಷೆಗಳು ಹೇಳಿದಂತೆ ಕಾಂಗ್ರೆಸ್‌ 59 ಸ್ಥಾನಗಳನ್ನಷ್ಟೇ ಪಡೆದರೆ ಸರ್ಕಾರ ರಚಿಸುವ ನೈತಿಕ ಹಕ್ಕು ಇರುವುದಿಲ್ಲ’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

‘1989ರಲ್ಲಿ ಕಾಂಗ್ರೆಸ್‌ ಏಕೈಕ ದೊಡ್ಡ  ಪಕ್ಷವಾಗಿ ಹೊರಹೊ­ಮ್ಮಿದ್ದರೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ವಿರೋಧ ಪಕ್ಷದಲ್ಲಿ ಕೂರಲು ನಿರ್ಧರಿಸಿದ್ದರು.  ಆಗ ಕಾಂಗ್ರೆಸ್‌ಗೆ 197 ಸ್ಥಾನಗಳು ಬಂದಿ­ದ್ದವು. 1984 ರ ಚುನಾವಣೆ­ಯಲ್ಲಿ ಪಕ್ಷ 404 ಸ್ಥಾನಗಳನ್ನು ಪಡೆದಿತ್ತು. ಇದಕ್ಕೆ ಹೋಲಿಸಿದರೆ 1989ರ ಸ್ಥಾನ­ಗಳು ಕಡಿಮೆ ಎಂಬ ದೃಷ್ಟಿಯಿಂದ ರಾಜೀವ್‌ ಈ ನಿರ್ಧಾರ ಕೈಗೊಂ­ಡಿದ್ದರು’ ಎಂದು ಮತ್ತೊಬ್ಬ ಮುಖಂಡರು ಹೇಳಿದ್ದಾರೆ.

197 ಸ್ಥಾನ ಪಡೆದು ಸರ್ಕಾರ ರಚಿ­ಸು­ವುದು ನೈತಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷದ­ಲ್ಲಿರಲು ಪಕ್ಷ ಮುಂದಾಗಿತ್ತು ಎಂದು ಹೇಳಿದ್ದಾರೆ.

ಯುಪಿಎ ಕನಸು ಜೀವಂತ
ನವದೆಹಲಿ(ಪಿಟಿಐ)
: ಮತಗಟ್ಟೆ ಸಮೀಕ್ಷೆ­­ಗಳಲ್ಲಿ ಯುಪಿಎಗೆ ಹಿನ್ನಡೆ­ಯಾಗಿ­ದ್ದರೂ ಮೂರನೇ ಬಾರಿಗೆ ಯುಪಿಗೆ ಅಧಿಕಾರ ಹಿಡಿಯುವ ಕನಸನ್ನು ಇನ್ನೂ ಜೀವಂತ­ವಾಗಿಟ್ಟು ಕೊಂಡಿದೆ. ಒಟ್ಟಾರೆ ಎನ್‌ಡಿಎಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಪಕ್ಷಗಳ ಸಹಾಯ ಕೋರುವ ಬಗ್ಗೆಯೂ ಚಿಂತಿಸುತ್ತಿದೆ.

‘ಎನ್‌ಡಿಎ 200 ಕ್ಕಿಂತ ಕಡಿಮೆ ಸ್ಥಾನಗಳು ಲಭಿಸಲಿವೆ. ಒಂದು ವೇಳೆ ಹೀಗಾ­ದರೆ ಕಾಂಗ್ರೆಸ್‌ ಮತ್ತು ಸಮಾನಮನಸ್ಕ ಪಕ್ಷಗಳ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಲಿವೆ ಎಂದು ಹೆಸರು ಹೇಳಲಿಚ್ಛಿಸದ ಮುಖಂಡ ರೊಬ್ಬರು ಹೇಳಿದ್ದಾರೆ.

ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಅತ್ಯುತ್ತಮ ಅವಕಾಶವಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT