ADVERTISEMENT

ಕಾಂಗ್ರೆಸ್‌ ಮುಳುಗುವ ಹಡಗು: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಎಂದು ಅಭಿಪ್ರಾಯಪಟ್ಟಿರುವ ಬಿಜೆಪಿ ನಾಯಕ ಅರುಣ್‌ ಜೇಟ್ಲಿ, ಪಕ್ಷದ ಹಿರಿಯ ನಾಯಕರೇ ಪಕ್ಷ ತೊರೆಯುತ್ತಿದ್ದಾರೆ ಮತ್ತು ಲೋಕಸಭೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ.

ಪ್ರತಿಕೂಲ ಪರಿಸ್ಥಿತಿಯಿಂದಾಗಿ  ಹಿರಿಯ ನಾಯಕರೇ ಮುಳುಗುವ ಹಡಗನ್ನು ತೊರೆಯುತ್ತಿ­ದ್ದಾರೆ. ಕೆಲ­ವರು ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಇತರರು ಸ್ಪರ್ಧಿಸದಿರುವುದಕ್ಕಾಗಿ ಅನಾರೋಗ್ಯದ ಕತೆ ಕಟ್ಟುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಜೇಟ್ಲಿ, ‘ಕಷ್ಟಕರ ಸನ್ನಿವೇಶದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸು­ವು­ದಕ್ಕೆ ಬೇಕಾದಂತೆ ರಾಹುಲ್‌ ಮಾತ­ನಾ­ಡುತ್ತಿ­ದ್ದಾರೆ’ ಎಂದಿದ್ದಾರೆ.

‘ಜನಮತ ಸಮೀಕ್ಷೆಗಳು ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ 2009ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದಿದ್ದಾರೆ. ಕಾಂಗ್ರೆಸಿಗರ ಕುಂದು­ತ್ತಿರುವ ನೈತಿಕ ಸ್ಥೈರ್ಯ­­ವನ್ನು ಹೆಚ್ಚಿ­ಸಲು ಅವರು ಹೀಗೆ ಹೇಳಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ನಿಜವಾಗಿ ಅವರು ಹಾಗೆ ಹೇಳುತ್ತಿದ್ದಾರೆ ಎಂದಾದರೆ ಅವರು ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ’ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಯುಪಿಎಯ ಹಲವು ಅಂಗಪಕ್ಷಗಳು ಈಗ ಮೈತ್ರಿಕೂಟ ತೊರೆಯುತ್ತಿವೆ. ಕಳೆದ ಬಾರಿ ತಮಿಳುನಾಡು ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತ್ತು. ಆದರೆ ಈ ಬಾರಿ  ತಮಿಳು­ನಾಡಿ­ನಲ್ಲಿ ಏಕಾಂಗಿಯಾಗಿದೆ. ತೆಲಂಗಾಣ­­ದಲ್ಲಿ  ಮೈತ್ರಿಗೆ ಟಿಆರ್‌ಎಸ್‌ ನಿರಾಕರಿಸಿದೆ ಎಂದ ಜೇಟ್ಲಿ ಹೇಳಿದ್ದಾರೆ.

‘ಯಾವುದೇ ಕಾರ್ಯಸೂಚಿ ಇಲ್ಲದೆ, ಸೂಕ್ತ ಮೈತ್ರಿ ಇಲ್ಲದೆ, ಪರಿಣಾಮಕಾರಿ ನಾಯಕತ್ವ ಇಲ್ಲದೆ ಕಾಂಗ್ರೆಸ್‌ ಚುನಾ­ವಣೆ ಎದುರಿಸುತ್ತಿದೆ. ಕಾಂಗ್ರೆಸ್‌ಗೆ ಹಿನ್ನಡೆಯಾಗುವುದರಲ್ಲಿ ಅನುಮಾನ ಇಲ್ಲ’ ಎಂದು ಜೇಟ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.