ರಾಷ್ಟ್ರಧ್ವಜಕ್ಕೆ ಅಗೌರವ ಬೇಡ: ಆಯೋಗ
ನವದೆಹಲಿ (ಪಿಟಿಐ): ಚುನಾವಣಾ ರ್‍್ಯಾಲಿಗಳಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದರ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಇಂತಹ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನು ‘ಯೋಗ್ಯ ರೀತಿಯಲ್ಲಿ ಬಳಸುವುದಕ್ಕೆ’ ಯಾವುದೇ ನಿರ್ಬಂಧ ಇಲ್ಲ ಎಂದೂ ಆಯೋಗ ಸ್ಪಷ್ಟ ಪಡಿಸಿದೆ.
ಜಯಾ ಪರ ಪ್ರಚಾರಕ್ಕೆ ತಾರೆಯರು
ಚೆನ್ನೈ (ಐಎಎನ್‌ಎಸ್): ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗೇ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ವೆಣ್ಣಿರಾ ಆದೈ ನಿರ್ಮಲಾ ಅವರು ಈಗ ಎಐಎಡಿಎಂಕೆ ಪಕ್ಷದ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಐಎಡಿಎಂಕೆ ಶುಕ್ರವಾರ ಬಿಡುಗಡೆ ಮಾಡಿದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಜನಪ್ರಿಯ ನಟರಾದ ಸೆಂಥಿಲ್, ಸಿಂಗಮುತ್ತು, ಗುಂಡು ಕಲ್ಯಾಣಂ, ಕುಯಿಲಿ, ವಿಂಧ್ಯಾ, ಆನಂದ್ ರಾಜ್, ಪೊನ್ನಂ ಬಾಲಂ ಮತ್ತು ಟಿ.ವಿ ನಿರೂಪಕಿ ಫಾತಿಮಾ ಬಾಬು ಸೇರಿದಂತೆ ಒಟ್ಟು 19 ಜನರ ಹೆಸರುಗಳು ಸೇರಿವೆ. ಮಾರ್ಚ್ 11ರಿಂದ ಈ ಎಲ್ಲ ತಾರೆಯರು ಪ್ರಚಾರದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.
ಖ್ಯಾತನಾಮರಿಗೆ ಟಿಕೆಟ್: ಟೀಕೆ
ಕೋಲ್ಕತ್ತ (ಐಎಎನ್‌ಎಸ್): ‘ತಾಯಿ, ಜನ, ಭೂಮಿ (ಮಾ, ಮಾಟಿ, ಮಾನುಷ್) ಎಂಬ ಘೋಷವಾಕ್ಯದೊಂದಿಗೆ ರಾಜಕೀಯ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಲೋಕಸಭೆ ಚುನಾವಣೆಯಲ್ಲಿ ಖ್ಯಾತನಾಮರಿಗೆ ಟಿಕೆಟ್ ನೀಡಿರುವುದು ತೀವ್ರ ಟೀಕೆಗೆ ಕಾರಣವಾಗಿದೆ
ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಬಿಡುಗಡೆ ಮಾಡಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇರದ ಬಂಗಾಳಿ ನಟಿ ಮೂನ್ ಮೂನ್ ಸೆನ್, ಖ್ಯಾತ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರ ಹೆಸರಿದೆ.
‘ಅನ್ಯ ಕ್ಷೇತ್ರದ ಈ ಖ್ಯಾತರು ರಾಜಕೀಯದಲ್ಲಿ ಜನರ ಮಧ್ಯೆ ಸಮಯ ಕಳೆಯಲು ಸಾಧ್ಯವೇ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸೊಮೆನ್ ಮಿತ್ರಾ ಅವರು ಪ್ರಶ್ನಿಸಿದ್ದಾರೆ. ‘ಬೇಸಿಗೆಯಲ್ಲಿ ಮೋಹಕವಾಗಿ ಕಾಣಿಸಿಕೊಳ್ಳುವುದು ಬಹಳ ಕಷ್ಟ. ಆದರೆ, ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಎಲ್ಲೆಡೆ ಸಂಚರಿಸಿ ಜನರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸುಂದರವಾಗಿ ಕಾಣಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮೂನ್ ಮೂನ್ ಸೇನ್ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಪಹಾಸ್ಯಕ್ಕೆ ಕಾರಣವಾಗಿದೆ.
‘ಬುಡ್ಡಾ’ ಎಂದವನ ಪತ್ನಿ ಟಿಕೆಟ್ ಕಟ್
ಆಗ್ರಾ (ಐಎಎನ್‌ಎಸ್): ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ‘ಬುಡ್ಡಾ’ (ಮುದುಕ) ಎಂದು ಹೇಳಿದ ದೇವೇಂದ್ರ ಬಾಗೇಲ್ ಅವರ ಪತ್ನಿ ಹಾಗೂ ಲೋಕಸಭೆಯ ಅಭ್ಯರ್ಥಿ ಸಾರಿಕಾ ಬಾಗೇಲ್ ಅವರನ್ನು ಪಕ್ಷ ಅಮಾನತುಗೊಳಿಸಿದೆ.
‘ಆಗ್ರಾ ಲೋಕಸಭೆಯ ಕ್ಷೇತ್ರದಿಂದ ಪಕ್ಷವು ಈಗ ಮಹಾರಾಜ್ ಸಿಂಗ್ ಢಂಗರ್ ಅವರನ್ನು ಕಣಕ್ಕಿಳಿಸಲಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್ ತಿಳಿಸಿದ್ದಾರೆ.
ದೇವೇಂದ್ರ ಬಾಗೇಲ್ ಅವರು ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದ ಸಂದರ್ಭದಲ್ಲಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ಅನುಚಿತವಾಗಿ ಮಾತನಾಡಿದ್ದರು. ಈ ಘಟನೆ ಜರುಗಿದ ಕೆಲವೇ ಗಂಟೆಗಳಲ್ಲಿ ಪಕ್ಷವು ಅವರ ಪತ್ನಿ ವಿರುದ್ಧ ಕ್ರಮ ಜರುಗಿಸಿದೆ. ‘ಪಕ್ಷ ಯಾವುದೇ ಕ್ರಮ ಕೈಗೊಂಡಿದ್ದರೂ ನಾನು ಮುಲಾಯಂ ಸಿಂಗ್ ಯಾದವ್ ಅವರಿಗೆ ನಿಷ್ಠನಾಗಿದ್ದೇನೆ’ ಎಂದು ದೇವೇಂದ್ರ ಬಾಗೇಲ್ ತಿಳಿಸಿದ್ದಾರೆ.
ಜಗನ್ ಪಕ್ಷ ಆಂಧ್ರದ ಎಲ್ಲೆಡೆ ಸ್ಪರ್ಧೆ
ಹೈದರಾಬಾದ್ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಎಲ್ಲಾ ಭಾಗಗಳಿಂದಲೂ ಸ್ಪರ್ಧಿಸುವುದಾಗಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಶನಿವಾರ ಹೇಳಿದೆ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿಯೂ ಅದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.