ADVERTISEMENT

ಜನತಂತ್ರದಲ್ಲಿ ಯಾರೂ ವೈರಿಗಳಲ್ಲ

ಭಾವಿ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:30 IST
Last Updated 16 ಮೇ 2014, 19:30 IST

ಡೋದರಾ (ಪಿಟಿಐ): ‘ಜನತಂತ್ರದಲ್ಲಿ ಯಾರೂ ವೈರಿಗಳಲ್ಲ.  ಎದುರಾಳಿಗಳು ಅಷ್ಟೆ. ಸ್ಪರ್ಧೆ ಎನ್ನುವುದು ಚುನಾವಣೆ ಮುಗಿಯುವುದರೊಂದಿಗೆ ಅಂತ್ಯವಾಗುತ್ತದೆ. ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ (ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌) ಎನ್ನುವುದು ನನ್ನ ಧ್ಯೇಯ ಮಂತ್ರ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಐತಿಹಾಸಿಕ ವಿಜಯ ದಾಖಲಿಸಿದ ಬಳಿಕ 45 ನಿಮಿಷ ಮಾತನಾಡಿದ  ಅವರು, ‘ದೇಶವನ್ನು ಮುನ್ನಡೆಸಲು ಎಲ್ಲ ಪಕ್ಷಗಳ ಹಾಗೂ ಮುಖಂಡರ ಸಹಕಾರ ಬೇಕು. ಸರ್ಕಾರ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ.  ಇಡೀ ದೇಶದ ಜನರಿಗೆ ಸೇರಿದೆ’ ಎಂದರು.

ಲೋಕಸಭೆ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದ ಎಲ್ಲ ಪಕ್ಷದ ಸಂಸದರು ಹಾಗೂ ಶಾಸಕರನ್ನು ಮೋದಿ ಈ ಸಂದರ್ಭದಲ್ಲಿ ಅಭಿನಂದಿಸಿದರು. ಪ್ರಚಾರದ ವೇಳೆ ಕೇಳಿಬಂದ ಆರೋಪ ಪ್ರತ್ಯಾರೋಪ­ಗಳನ್ನು ಉಲ್ಲೇಖಿಸುತ್ತಾ,  ‘ನನ್ನ ಎದುರಾಳಿಗಳು ತೋರಿಸಿದ ‘‘ಪ್ರೀತಿ’’ಯನ್ನು “ನಿಷ್ಕಲ್ಮಶ’’ ಪ್ರೀತಿಯನ್ನಾಗಿ ಪರಿವರ್ತಿಸು­ತ್ತೇನೆ. ವಿರೋಧಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎನ್ನುವುದು ನನ್ನ ಗುರಿಯಾಗಿದೆ’ ಎಂದರು.

‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ಸೇತರ ಪಕ್ಷ-­ವೊಂದು ಪ್ರಚಂಡ ವಿಜಯ ಸಾಧಿಸಿರುವುದು ಮಹತ್ವದ ಬೆಳ­ವಣಿಗೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಜನಿಸಿದವರ ಕೈಗೆ ಮೊಟ್ಟ ಮೊದಲ ಬಾರಿ ಅಧಿಕಾರ ದಂಡ ಸಿಕ್ಕಿದೆ ಎನ್ನುವುದು ಅಷ್ಟೇ ಮಹತ್ವದ್ದು’ ಎಂದು ಅವರು ಹೇಳಿದ್ದೇ ತಡ ಜನಸ್ತೋಮದಿಂದ ‘ಮೋದಿ, ಮೋದಿ, ಮೋದಿ’ ಎಂಬ ಘೋಷಣೆ ಕೇಳಿಬಂತು.

ತಮ್ಮನ್ನು ‘‘ಕೂಲಿ ನಂಬರ್‌ ಒನ್‌’’ ಎಂದು ಕರೆದುಕೊಂಡ ಮೋದಿ, ‘ ನನ್ನ ಪರಿಶ್ರಮವನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದೂ ಹೇಳಿದರು.

ಮೋದಿ ಹೇಳಿದ್ದು... 
*ವಡೋದರಾ ಕ್ಷೇತ್ರದಲ್ಲಿ 5.7 ಲಕ್ಷ ಮತಗಳಿಂದ ಗೆದ್ದಿದ್ದು ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯಾಗಿದೆ
*ದೇಶದ ಜನ ನಮ್ಮನ್ನು  ಬಹುಮತದಿಂದ ಗೆಲ್ಲಿಸಿದ್ದಾರೆ. ಆದ್ದರಿಂದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿದೆ
*ಪ್ರಜಾತಂತ್ರದಲ್ಲಿ ಜನಾದೇಶ ಮುಖ್ಯವಾದದ್ದು. ನಾವೆಲ್ಲ ಒಟ್ಟಾಗಿ ಜನ ಸೇವೆ ಮಾಡಬೇಕಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.