ಅಹಮದಾಬಾದ್ (ಪಿಟಿಐ): ಎಲ್.ಕೆ. ಅಡ್ವಾಣಿ ಅವರ ನಿಷ್ಠ ಹಾಗೂ ಏಳು ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದ ಹರಿನ್ ಪಾಠಕ್ ಅವರು ಈ ಬಾರಿ ಲೋಕಸಭಾ ಟಿಕೆಟ್ ನಿರಾಕರಿಸಿದ ಪಕ್ಷದ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ.
‘ಪಕ್ಷದ ನಿರ್ಧಾರದಿಂದ ನನಗೆ ನೋವಾಗಿದೆ. ಮುಂದಿನ ನಿರ್ಧಾರ ಕೈಗೊಳ್ಳುವ ಮೊದಲು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ’ ಎಂದು ಅವರು ಹೇಳಿದರು. ‘ಪಕ್ಷವು ಕಾಂಗ್ರೆಸಿಗರನ್ನು ಸೇರಿಸಿಕೊಳ್ಳಲು ಮುಂದಾಗಿದೆ. ನರೇಂದ್ರ ಮೋದಿಯಂತಹ ಜನಪ್ರಿಯ ವ್ಯಕ್ತಿ ನಮ್ಮ ಜತೆ ಇರುವಾಗ ಇದರ ಅವಶ್ಯಕತೆ ಏನಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ’ ಎಂದರು.
‘ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಆದರೆ, ಕಾರ್ಯಕರ್ತರು ಪಕ್ಷಕ್ಕಿಂತಲೂ ದೊಡ್ಡವರು’ ಎಂದು ಮೋದಿ ಜನಪ್ರಿಯತೆ ಕುರಿತ ಪ್ರಶ್ನೆಗೆ ಉತ್ತರಿಸಿದರು.ಪಕ್ಷೇತರರಾಗಿ ಬಿಜೆಪಿ ಮತ್ತೊಬ್ಬ ನಾಯಕ (ಜೈಪುರ ವರದಿ): ಸಿಕಾರ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿರುವ ರಾಜಸ್ತಾನ ಬಿಜೆಪಿಯ ಹಿರಿಯ ನಾಯಕ ಸುಭಾಷ್ ಮಹಾರಿಯ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಸಿಕಾರ್‌ನಲ್ಲಿ ನಡೆಸಲಾದ ಬೃಹತ್ ಸಮಾವೇಶದಲ್ಲಿ ಜಾಟ್ ಸಮುದಾಯದ ಪ್ರಭಾವಿ ನಾಯಕ ಮಹಾರಿಯ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು. ಸುಮೇದಾನಂದ ಅವರಿಗೆ ಬಿಜೆಪಿ ಇಲ್ಲಿ ಟಿಕೆಟ್ ನೀಡಿದ್ದು, ಇವರಿಗೆ ಟಿಕೆಟ್ ನೀಡಿಕೆಯನ್ನು ಮಹಾರಿಯ ಬೆಂಬಲಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಬಿಜೆಪಿಯಿಂದ ಅವಮಾನ– ಶರ್ಮಾ (ಭೋಪಾಲ್ ವರದಿ): ಮಂಡ್ಸೋರ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿರುವುದರಿಂದ ನೋವು, ಅವಮಾನವಾಗಿದೆ ಎಂದು ಮಧ್ಯಪ್ರದೇಶ ಬಿಜೆಪಿ ಉಪಾಧ್ಯಕ್ಷ ರಘುನಂದನ್ ಶರ್ಮಾ ಹೇಳಿದ್ದಾರೆ. ‘ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಪಕ್ಷದಿಂದ ಏನನ್ನೂ ಕೇಳಿಲ್ಲ. ಮಂಡ್ಸೋರ್‌ನಿಂದ ಸ್ಪರ್ಧಿಸಲು ಮೊದಲ ಬಾರಿ ನಾನು ಟಿಕೆಟ್ ಕೇಳಿದೆ. ಅದನ್ನು ಪಕ್ಷ ನಿರಾಕರಿಸಿದೆ’ ಎಂದು ರಾಜ್ಯ ಸಭಾ ಸದಸ್ಯ ಶರ್ಮಾ ಹೇಳಿದರು.
ಬಿಜೆಪಿಯು ಕೆಲವೊಮ್ಮೆ ಪಕ್ಷದವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ, ‘ಕೆಲವೊಮ್ಮೆ ಅಲ್ಲ ಯಾವಾಗಲೂ’ ಎಂದು ಅವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.