ADVERTISEMENT

ತಮಿಳುನಾಡಿನಲ್ಲಿ ಬಿಜೆಪಿಗೆ ಬಲ

ಏಳು ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಏಪ್ರಿಲ್‌ 24ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಏಳು ಪಕ್ಷಗಳ ಮೈತ್ರಿಕೂಟವನ್ನು ಪ್ರಕಟಿಸಿದೆ. ಮುಖ್ಯವಾಗಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆಯೇ ನೇರ ಹಣಾಹಣಿ ನಡೆಯುವ ರಾಜ್ಯದಲ್ಲಿ ಇದೇ ಮೊದಲ  ಬಾರಿಗೆ ಏಳು ಪಕ್ಷಗಳ ಮೈತ್ರಿಕೂಟ ಗುರುವಾರ ಅಸ್ತಿತ್ವಕ್ಕೆ ಬಂದಿದೆ.

ಮೈತ್ರಿಕೂಟದ ಘೋಷಣೆ ಮಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್‌ ಅವರು, ತಮಿಳುನಾಡಿಗೆ ಇದೊಂದು ಚಾರಿತ್ರಿಕ ಕ್ಷಣವಾಗಿದೆ. ಏಳು ಪಕ್ಷಗಳು ಎನ್‌ಡಿಎ ತೆಕ್ಕೆಗೆ ಸೇರಿವೆ ಎಂದು ಹೇಳಿದರು. ಮಿತ್ರಕೂಟದ ಎಲ್ಲ ಪಕ್ಷಗಳ ಮುಖ್ಯಸ್ಥರ ಜೊತೆ ರಾಜನಾಥ ಸಿಂಗ್‌ ಪತ್ರಿಕಾಗೋಷ್ಠಿ ನಡೆಸಿದರು.

ರಾಜ್ಯದ 39 ಕ್ಷೇತ್ರಗಳ ಪೈಕಿ ನಟ ವಿಜಯಕಾಂತ್‌ ನೇತೃತ್ವದ ಡಿಎಂಡಿಕೆ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಿಎಂಕೆ ಮತ್ತು ಬಿಜೆಪಿ ತಲಾ ಎಂಟು ಸ್ಥಾನಗಳಿಗೆ ಸ್ಪರ್ಧಿಸಲಿವೆ. ವೈಕೊ ನೇತೃತ್ವದ ಎಂಡಿಎಂಕೆಗೆ ಏಳು ಕ್ಷೇತ್ರಗಳನ್ನು ನೀಡಲಾಗಿದ್ದರೆ, ಐಜೆಕೆ ಮತ್ತು ಕೆಎಂಡಿಕೆ ಪಕ್ಷಗಳು ತಲಾ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಸ್ಥಾನ ಹೊಂದಾಣಿಕೆಗಾಗಿ ಸುಮಾರು ಒಂದು ತಿಂಗಳಿಂದ ಈ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಮಿತ್ರಕೂಟದ ಪಕ್ಷಗಳು ಕೆಲವು ಕ್ಷೇತ್ರಗಳ ಮೇಲೆ ಪಟ್ಟು ಹಿಡಿದು ಕ್ಷೇತ್ರಗಳ ಹಂಚಿಕೆ ಕಗ್ಗಂಟಾಗಿತ್ತು. ಈಗ ಎಲ್ಲವೂ ಪರಿಹಾರವಾಗಿರುವುದರಿಂದ ಸ್ಥಳೀಯ ಬಿಜೆಪಿ ಮುಖಂಡರು ಸಂತೃಪ್ತರಾಗಿದ್ದಾರೆ. ರಾಜ್ಯದಿಂದ ಗಣನೀಯ ಸಂಖ್ಯೆಯ ಸಂಸದರು ಆಯ್ಕೆಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜನಾಥ ಸಿಂಗ್‌್ ಅವರು ಚೆನ್ನೈಗೆ ಬಂದ ಕೂಡಲೇ ಮಿತ್ರಪಕ್ಷಗಳ ನಾಯಕರೊಂದಿಗೆ ಸುಮಾರು ನಾಲ್ಕು ತಾಸು ಮಾತುಕತೆ ನಡೆಸಿ, ಬಿಕ್ಕಟ್ಟು ತಲೆದೋರಿದ್ದ ಕ್ಷೇತ್ರಗಳ  ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಲ್ಲಿ ಯಶಸ್ವಿಯಾದರು ಎಂದು ಪಕ್ಷದ ಮೂಲಗಳು ಹೇಳಿವೆ.

ರಾಜ್ಯದ ಎರಡು ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳು ಮೀನುಗಾರರ ಸಮಸ್ಯೆಗಳು ಮತ್ತು ಶ್ರೀಲಂಕಾ ತಮಿಳರ ಸಮಸ್ಯೆಗಳ ಭಾವನಾತ್ಮಕ ವಿಷಯವನ್ನೇ ಮುಂದಿಟ್ಟು ಚುನಾವಣೆ ಎದುರಿಸುತ್ತಿವೆ. ಬಿಜೆಪಿ ಮಿತ್ರಕೂಟ ಕೂಡ ಅದೇ ವಿಷಯಗಳನ್ನು ಚುನಾವಣೆಗೆ ಬಳಸಿಕೊಳ್ಳಲಿದೆ ಎಂಬ ಸೂಚನೆಯನ್ನು ರಾಜನಾಥ ಸಿಂಗ್‌ ನೀಡಿದ್ದಾರೆ.

ಇನ್ನೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಹಿಂದಿನ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುತ್ತಾ ಬಂದಿತ್ತು. ಆದರೆ ಈ ಬಾರಿ ಎರಡೂ ದ್ರಾವಿಡ ಪಕ್ಷಗಳು ಕಾಂಗ್ರೆಸ್‌ ಜೊತೆ ಮೈತ್ರಿಗೆ ಮುಂದಾಗಿಲ್ಲ. ಹಾಗಾಗಿ ಕಾಂಗ್ರೆಸ್‌ ಇಲ್ಲಿ ಏಕಾಂಗಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.