ADVERTISEMENT

ದೆಹಲಿ ಗದ್ದುಗೆಯತ್ತ ಎನ್‌ಡಿಎ

ವಿವಿಧ ವಾಹಿನಿಗಳ ಮತಗಟ್ಟೆ ಸಮೀಕ್ಷೆ * ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಬಿಜೆಪಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 12 ಮೇ 2014, 20:11 IST
Last Updated 12 ಮೇ 2014, 20:11 IST

ನವದೆಹಲಿ (ಪಿಟಿಐ): ಕೇಂದ್ರದಲ್ಲಿ ಹತ್ತು ವರ್ಷಗಳ ಸಂಯುಕ್ತ ಪ್ರಗತಿಪರ ಮೈತ್ರಿ­ಕೂಟದ (ಯುಪಿಎ) ಆಡಳಿತ ಕೊನೆ­ಗೊಂಡು, ನರೇಂದ್ರ ಮೋದಿ ನೇತೃತ್ವದ  ಬಿಜೆಪಿ ಮೈತ್ರಿಕೂಟ (ಎನ್‌ಡಿಎ) ದೇಶದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು  ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ವಿವಿಧ ಸುದ್ದಿವಾಹಿನಿಗಳು ಸೋಮ­ವಾರ ಸಂಜೆ ಪ್ರಸಾರ ಮಾಡಿದ ಸಮೀಕ್ಷೆಗಳು ಇಂತಹದ್ದೊಂದು ಸಾಧ್ಯತೆ ದಟ್ಟವಾಗಿರುವ ಸೂಚನೆ ನೀಡಿವೆ.

ಈ ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕನಿಷ್ಠ 249ರಿಂದ ಗರಿಷ್ಠ 340 ಸ್ಥಾನ ಗಳಿಸುವ ಸಾಧ್ಯತೆಯಿದೆ.  545 ಸದಸ್ಯ ಬಲದ ಲೋಕ­­ಸಭೆಯಲ್ಲಿ ಇದು ಸರಳ ಬಹುಮತಕ್ಕೆ ಹತ್ತಿರವಾದ ಸಂಖ್ಯೆ. 

ದೆಹಲಿ ಗದ್ದುಗೆಗೆ ದಾರಿ ಎನ್ನಲಾದ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರಿ ಯಶಸ್ಸು ಸಿಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಅಂದಾಜಿಸಿವೆ. ಟೈಮ್ಸ್‌ ನೌ ವಾಹಿನಿ ಪ್ರಕಾರ, 80 ಕ್ಷೇತ್ರಗಳ ಪೈಕಿ 52 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.

ಹಿಂದಿ ಪ್ರಾಬಲ್ಯದ ಮಧ್ಯಪ್ರದೇಶ, ಛತ್ತೀಸಗಡ, ಬಿಹಾರಗಳಲ್ಲೂ ಬಿಜೆಪಿಗೆ ಹೆಚ್ಚಿನ ಬಲ ಲಭಿಸಲಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಕೂಟ ಮೇಲುಗೈ ಸಾಧಿಸಲಿದೆ. ರಾಜಸ್ತಾನದ ಎಲ್ಲ 25 ಸ್ಥಾನಗಳು ಬಿಜೆಪಿ ಪಾಲಾಗಲಿವೆ.

ದೇಶದ ರಾಜಧಾನಿ ದೆಹಲಿಯ ಎಲ್ಲ 7 ಸ್ಥಾನಗಳೂ ಬಿಜೆಪಿ ಬುಟ್ಟಿಗೆ ಬೀಳಲಿವೆ.

ಕಾಂಗ್ರೆಸ್‌ ಕುಸಿತ:  ಹಾಗೆಯೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಕನಿಷ್ಠ 70ರಿಂದ ಗರಿಷ್ಠ 148 ಸ್ಥಾನ ಗಳಿಸುವ ನಿರೀಕ್ಷೆಯಿದೆ.

ಪ್ರಾದೇಶಿಕ ಪಕ್ಷಗಳ ಸಾಧನೆ:   ಎನ್‌ಡಿಎ, ಯುಪಿಎ ಹೊರತಾದ ಇತರ ಪ್ರಾದೇಶಿಕ ಪಕ್ಷಗಳು  ಕನಿಷ್ಠ 122ರಿಂದ ಗರಿಷ್ಠ 172 ಸ್ಥಾನ ಗಳಿಸುವ ಸೂಚನೆಯಿದ್ದು, ಯುಪಿಎ ಮೂರನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆಯಿದೆ.

ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಆಶಾಭಾವನೆ ಕಾಣುತ್ತಿದ್ದು, ಕರ್ನಾಟಕ, ಕೇರಳ, ತೆಲಂಗಾಣದ ಮತದಾರರು  ಆ ಪಕ್ಷದ ಕೈ ಹಿಡಿದಂತೆ ಕಾಣುತ್ತಿದೆ.

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಕೇರಳದ 20 ಸ್ಥಾನಗಳ ಪೈಕಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 11ರಿಂದ 14 ಸ್ಥಾನದಲ್ಲಿ ಜಯಭೇರಿ ಸಾಧಿಸಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಭಾರಿ ಜಯ ಗಳಿಸುವ ಸೂಚನೆಯಿದ್ದು, ಒಂದು ಸಮೀಕ್ಷೆ ಪ್ರಕಾರ ಒಟ್ಟು 39ರಲ್ಲಿ 31 ಸ್ಥಾನಗಳನ್ನು ಆ ಪಕ್ಷ ಗೆದ್ದುಕೊಳ್ಳಲಿದೆ.

ಪಶ್ಚಿಮಬಂಗಾಳದ 42 ಸ್ಥಾನಗಳ ಪೈಕಿ  ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷ 31 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಪ್ರಧಾನಿ ಸೋನಿಯಾ ಭೇಟಿ: ಚುನಾ­ವಣೆ­ಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅತಿ ಕಡಿಮೆ ಸ್ಥಾನಗಳನ್ನು ಪಡೆ­ಯ­ಲಿದೆ ಎಂಬ ಸಮೀಕ್ಷೆಗಳು ಸುದ್ದಿವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿ­ದ್ದಂತೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ್‌ ಸಿಂಗ್‌  ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಸಭೆ ಸೇರಿ ಚರ್ಚಿಸಿದರು.

ಚರ್ಚೆಗೆ ಕಾಂಗ್ರೆಸ್‌ ಇಲ್ಲ: ವಿವಿಧ ಸುದ್ದಿ ವಾಹಿ­ನಿ­ಗಳು ನಡೆಸುವ ‘ಮತಗಟ್ಟೆ ಸಮೀಪ ಸಮೀಕ್ಷೆ’ ಚರ್ಚೆ­ಯಲ್ಲಿ ಭಾಗ­ವಹಿಸದಿ­ರಲು ಕಾಂಗ್ರೆಸ್‌ ನಿರ್ಧರಿಸಿತ್ತು.

‘2004 ಮತ್ತು 2009 ರ ಸಾರ್ವ­ತ್ರಿಕ ಚುನಾವಣೆಗಳಲ್ಲಿ ಮತ­ಗಟ್ಟೆ ಸಮೀಪ ಸಮೀಕ್ಷೆ ಮತ್ತು ಜನಮತ ಸಂಗ್ರ­ಹ­­­ಗಳು ಸುಳ್ಳು ಎಂದು ಸಾಬೀ­ತಾಗಿವೆ. ಕಳೆದ ಸಲ ಒಂದು ವಾಹಿನಿಯ ಮತಗಟ್ಟೆ ಸಮೀಪ ಸಮೀಕ್ಷೆಯ ಅಂದಾಜು ಮತ್ತು ವಾಸ್ತವ­ವಾಗಿ ಕಾಂಗ್ರೆಸ್‌ ಪಡೆದ ಸ್ಥಾನಗಳ ನಡುವೆ 68 ಸ್ಥಾನ­ಗಳ ಅಂತರವಿತ್ತು’ ಎಂದೂ ಅವರು ನೆನಪಿಸಿ ಕೊಂಡಿದ್ದಾರೆ.

ADVERTISEMENT


ಇನ್ನಷ್ಟು ಸುದ್ದಿಗಳು:

ಭರ್ಜರಿ ಮತದಾನ: ಸಾರ್ವಕಾಲಿಕ ದಾಖಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.