ಚಂಡೀಗಡ (ಐಎಎನ್‌ಎಸ್): ಚಂಡೀಗಡ ಲೋಕಸಭಾ ಕ್ಷೇತ್ರ ಗ್ಲಾಮರ್ನಿಂದ ಕಂಗೊಳಿಸುತ್ತಿದೆ. ಇಬ್ಬರು ಗುಳಿಕೆನ್ನೆಯ ಸಿನಿಮಾ ನಟಿಯರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಇಲ್ಲಿ 58 ವರ್ಷದ ನಟಿ ಕಿರಣ್ ಖೇರ್ ಅವರನ್ನು ಕಣಕ್ಕಿಳಿಸಿದರೆ ಆಮ್ ಆದ್ಮಿ ಪಕ್ಷದಿಂದ 35 ವರ್ಷದ ನಟಿ ಗುಲ್ ಪನಾಗ್ ಸ್ಪರ್ಧಿಸಿದ್ದಾರೆ.
ಇವರೆಲ್ಲರೂ ಸ್ಪರ್ಧಿಸಬೇಕಿರುವುದು ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಕುಮಾರ್ ಬನ್ಸಲ್ ವಿರುದ್ಧ. ಬನ್ಸಲ್ ಇಲ್ಲಿ 1991, 99, 2004 ಮತ್ತು 2009ರಲ್ಲಿ ಗೆದ್ದಿದ್ದರೆ, 1996, 98ರಲ್ಲಿ ಸೋತಿದ್ದಾರೆ. 2009ರಲ್ಲಿ ಬನ್ಸಲ್ ಗೆಲುವಿನ ಅಂತರ 60,000 ಮತಗಳು. ಈ ಬಾರಿ ಕುಟುಂಬದ ಸದಸ್ಯರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪ ಚುನಾವಣೆಯಲ್ಲಿ ಬನ್ಸಲ್ ಅವರಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
ಈ ನಟಿಯರು ಹೊರಗಿನವರು ಎಂಬ ವಿಚಾರ ಇವರ ವಿರುದ್ಧ ಕೆಲಸ ಮಾಡಬಹುದು. ಖೇರ್ ಚಂಡೀಗಡದಲ್ಲಿ ಹುಟ್ಟಿ ಬೆಳೆದವರು. ಅವರ ಸಹೋದರಿ ಇಲ್ಲಿಯೇ ನೆಲೆಸಿದ್ದಾರೆ. ಗುಲ್ ಪನಾಗ್ ತಂದೆ ಕೂಡ ಇಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ ಇಬ್ಬರೂ ನಟಿಯರು ಮಾತ್ರ ಮುಂಬೈ ವಾಸಿಗಳು. ಇವರೊಂದಿಗೆ ಬಿಎಸ್‌ಪಿ ಸ್ಥಳೀಯ ಕಾರ್ಪೊರೇಟರ್ 34ರ ಯುವತಿ ಜನ್ನತ್ ಜಹಾನ್ ಅವರನ್ನು ಹುರಿಯಾಳಾಗಿಸಿದೆ.
ಈ ಮೂವರಿಗೂ ತಾವು ಗಂಭೀರ ಅಭ್ಯರ್ಥಿಗಳು ಎಂಬುದನ್ನು ಸಾಬೀತುಪಡಿಸಲು 25 ದಿನಗಳ ಅವಕಾಶ ಇದೆ. ಹೊರಗಿನಿಂದ ಬಂದವರು ಎಂಬ ಟೀಕೆಗಳನ್ನು ಅವರು ಹಿಮ್ಮೆಟ್ಟಿಸಬೇಕು ಎಂದು ಮೊದಲ ಬಾರಿ ಮತ ಚಲಾಯಿಸಲಿರುವ ವಿದ್ಯಾರ್ಥಿನಿ ಶ್ರೀಯ ಹೇಳುತ್ತಾರೆ.
ರೈಲ್ವೆ ಅಧಿಕಾರಿಗೆ ಆಕರ್ಷಕ ಹುದ್ದೆ ಕೊಡಿಸುತ್ತೇನೆ ಎಂದು ₨ 90 ಲಕ್ಷ ಲಂಚ ಸ್ವೀಕರಿಸಿ ಬನ್ಸಲ್ ಸೋದರಳಿಯ ಸಿಕ್ಕಿ ಬಿದ್ದ ನಂತರ ರೈಲ್ವೆ ಸಚಿವ ಸ್ಥಾನಕ್ಕೆ ಬನ್ಸಲ್ ರಾಜೀನಾಮೆ ನೀಡಿದ್ದರು.
ಪ್ರಕರಣದಲ್ಲಿ ಬನ್ಸಾಲ್ ಹೆಸರನ್ನು ಸಿಬಿಐ ಸೇರಿಸಿಲ್ಲ. ಈ ಹಗರಣ ಬಿಟ್ಟರೆ ಬನ್ಸಾಲ್ ಶುದ್ಧ ಚಾರಿತ್ರ್ಯವನ್ನೇ ಹೊಂದಿದ್ದಾರೆ. ಆದರೂ ಕುಟುಂಬ ಸದಸ್ಯರು ಹಗರಣದಲ್ಲಿ ಭಾಗಿಯಾಗಿರುವುದು ಬನ್ಸಾಲ್ ಅವರನ್ನು ಚುನಾವಣೆಯಲ್ಲಿ ಕಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.