ADVERTISEMENT

ಮೋದಿ ಸಂಚಲನ: ಉ.ಪ್ರ ಚಿತ್ರಣ ಮಬ್ಬು

ಸಂಜಯ ಪಾಂಡೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಸಮಾವೇಶಗಳಿಗೆ ಸೇರುವ ಜನರ ಪ್ರಮಾಣವೇ ಚುನಾವಣಾ ಯಶಸ್ಸಿನ ಸೂಚನೆಯಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ  ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ. ಆದರೆ, 80 ಲೋಕ­ಸಭಾ ಸದಸ್ಯರನ್ನು ಹೊಂದಿದ್ದು, ರಾಜಕೀಯವಾಗಿ ಅತ್ಯಂತ ಮಹತ್ವದ ಉತ್ತರ ಪ್ರದೇಶದ ಚುನಾವಣಾಪೂರ್ವ ಚಿತ್ರಣ ಅತ್ಯಂತ ಮಬ್ಬಾಗಿದೆ. ಯಾವುದೇ ಪಕ್ಷ ಗೆಲ್ಲಬಹುದು ಎಂದು ಸ್ಪಷ್ಟವಾಗಿ ಹೇಳುವ ಪರಿಸ್ಥಿತಿ ಅಲ್ಲಿ ಇಲ್ಲ.

ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ  ಪಕ್ಷ (ಎಸ್‌ಪಿ) ಸಮಾ­ವೇಶ ನಡೆಸುವುದರಲ್ಲಿ ಮೋದಿ ಅವರೊಂದಿಗೆ ಸಮರ ನಡೆಸುತ್ತಿದೆ. ಮೋದಿ ಸಮಾವೇಶ ನಡೆಯುವ ದಿನವೇ ಬೇರೊಂದು ಸ್ಥಳದಲ್ಲಿ ಎಸ್‌ಪಿ ಸಮಾವೇಶ ನಡೆಸುತ್ತಿದೆ. ಎಸ್‌ಪಿ ಸಮಾವೇಶಗಳಿಗೂ ಭಾರಿ ಪ್ರಮಾಣ­ದಲ್ಲಿ ಜನ ಸೇರುತ್ತಿದ್ದಾರೆ. ಇದು ರಾಜ್ಯದ ಒಟ್ಟು ಚಿತ್ರಣವನ್ನು ಇನ್ನಷ್ಟು ಗೊಂದಲಕಾರಿಯಾಗಿಸಿದೆ.

ಮೇಲ್ಜಾತಿ ಮತಗಳು ಬಿಜೆಪಿಯೆಡೆಗೆ ವಾಲುವ ಸಾಧ್ಯತೆ ಇರುವುದರಿಂದ ಈ ಬಾರಿ ಕಾಂಗ್ರೆಸ್‌ ತನ್ನ ಕೆಲವು ಸ್ಥಾನ­ಗಳನ್ನು ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಸ್ಥಾನಗಳು ಎಸ್‌ಪಿ, ಬಿಎಸ್‌ಪಿ ಮತ್ತು ಬಿಜೆಪಿಯಲ್ಲಿ ಯಾವ ಪಕ್ಷಕ್ಕೆ ಲಾಭ­ವಾಗಬಹುದು ಎಂದ ಹೇಳುವುದು ಕಷ್ಟ. 

ಮೋದಿ ಅವರ ಸಮಾವೇಶಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಬರುತ್ತಿರು­ವುದು ಬಿಜೆಪಿಯ ಹುಮ್ಮಸ್ಸಿಗೆ ಕಾರಣ­ವಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ (2012) ಬಿಜೆಪಿ ಗಳಿಸಿದ್ದು ಕೇವಲ ಶೇ 15ರಷ್ಟು ಮತ­ಗಳನ್ನು ಮಾತ್ರ. 1998ರ ಲೋಕಸಭೆ ಚುನಾವಣೆಯಲ್ಲಿ ಶೇ 36.48ರಷ್ಟು ಮತಗಳನ್ನು ಪಡೆದ ನಂತರ ಬಿಜೆಪಿಯ ಗಳಿಗೆ ಕುಗ್ಗತ್ತಲೇ ಸಾಗಿದೆ. ಆಗ ಬಿಜೆಪಿಗೆ 58 ಸ್ಥಾನಗಳೂ ದೊರೆತಿದ್ದವು. 2004­ರಲ್ಲಿ ಮತಪ್ರಮಾಣ ಶೇ 22.17ಕ್ಕೆ ಇಳಿದರೆ ಗೆದ್ದ ಸ್ಥಾನಗಳು 10 ಮಾತ್ರ. 2009ರ ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣ ಶೇ 17.85ಕ್ಕೆ ಇಳಿಯಿತು.

ಮೋದಿ ಒಗ್ಗಟ್ಟು ಮೂಡಿಸಬೇಕಿದೆ: ‘ಮೋದಿ ಅವರ ಮುಂದಿರುವ ಸವಾಲು ಪಕ್ಷದ ಮತ ಪ್ರಮಾಣವನ್ನು ಏರಿಸು­ವುದು ಮಾತ್ರವಲ್ಲ, ಬಣಗಳಾಗಿ ಒಡೆದು ಹೋಗಿರುವ ರಾಜ್ಯ ಘಟಕದಲ್ಲಿ ಒಗ್ಗಟ್ಟು ಕೂಡ ಮೂಡಿಸಬೇಕಿದೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

‘ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿರುವುದೇ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಅದನ್ನು ಉಳಿಸಿಕೊಳ್ಳಲು ಪರಸ್ಪರ ವಿರುದ್ಧವಾಗಿರುವ ಬಣಗಳನ್ನು ಒಟ್ಟು ಸೇರಿಸುವುದು ಅಗತ್ಯ’ ಎಂದು ಸ್ಥಳೀಯ ನಾಯಕರು ಹೇಳುತ್ತಾರೆ.
ಇತ್ತೀಚೆಗೆ ಮುಜಫ್ಫರ್‌ನಗರದಲ್ಲಿ ನಡೆದ ಗಲಭೆಯಲ್ಲಿ ಜಾಟ್‌ ಸಮು­ದಾಯಕ್ಕೆ ನೀಡಿದ ಕಿರುಕುಳದಿಂದಾಗಿ ಆ ಸಮುದಾಯ ಮುನಿಸಿಕೊಂಡಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಪ್ರಬಲ­ವಾಗಿರುವ ಜಾಟ್‌ ಸಮುದಾಯದ ಸಿಟ್ಟನ್ನು ತಮ್ಮ ಪರ ಮತಗಳಾಗಿ ಪರಿವರ್ತನೆಯಾಗಬಹುದು ಎಂಬ ಆಸೆ ಬಿಜೆಪಿಯಲ್ಲಿ ಇದೆ.

ಸಮಾವೇಶ ನಡೆಸುವಲ್ಲಿ ಕೂಡ ನರೇಂದ್ರ ಮೋದಿ ಮತ್ತು ಮುಲಾಯಂ ಸಿಂಗ್‌ ಯಾದವ್‌  ನಡುವಣ ಸ್ಪರ್ಧೆ, ತಾವೇ ಇಲ್ಲಿ ಮುಖ್ಯ ಎಂಬುದನ್ನು ಜನರ ಮನಸ್ಸಲ್ಲಿ ನಾಟುವಂತೆ ಮಾಡುವ ಯತ್ನವಾಗಿದೆ.

ಎಸ್‌ಪಿಯಿಂದ ಮುಸ್ಲಿಮರ ಓಲೈಕೆ: ಎಸ್‌ಪಿಯ ಯಶಸ್ಸು ನಿಂತಿರುವುದೇ ಮುಸ್ಲಿಂ ಬೆಂಬಲದ ಮೇಲೆ. ಮುಜಫ್ಫರ್‌­ನಗರ ಗಲಭೆ ಮತ್ತು 2012ರಲ್ಲಿ ಎಸ್‌ಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಹಲವು ಗಲಭೆಗಳು ಎಸ್‌ಪಿ ವಿರುದ್ಧ ಮುಸ್ಲಿಮರ ಸಿಟ್ಟಿಗೆ ಕಾರಣವಾಗಿದೆ.ಈತನಕದ ಅವಧಿಯಲ್ಲಿ ಕೋಮು ಗಲಭೆ ನಿಯಂತ್ರಿಸಲು ಎಸ್‌ಪಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯದ ಮುಸ್ಲಿಂ ಸಮುದಾಯ ಭಾವಿಸಿದೆ.

‘ಮನದಲ್ಲಿ ಕೋಮುಗಲಭೆಯ ಭೀತಿ ಸೃಷ್ಟಿಸಿ ಮುಸ್ಲಿಮರ ಮತ ಪಡೆಯ­ಬಹುದು ಎಂದು ಮುಲಾಯಂ ಭಾವಿಸಿದ್ದರೆ ಅದು ಈಡೇರದು’ ಎಂದು  ಭಯೋತ್ಪಾದನೆ ಆರೋಪದಲ್ಲಿ ಜೈಲಲ್ಲಿರುವ ಮುಸ್ಲಿಂ ಸಮುದಾಯದ ಯುವಕರನ್ನು ಬಿಡುಗಡೆಗೊಳಿಸಲು ಹೋರಾಡುತ್ತಿರುವ ಸಂಘಟನೆ ‘ರಿಹಾಯ್‌ ಮಂಚ್‌’ನ ಸದಸ್ಯ ಮಸೀದುದ್ದೀನ್‌ ಸಂಜರಿ ಹೇಳಿದ್ದಾರೆ.

ಎಸ್‌ಪಿ ಮುಸ್ಲಿಮರ ಓಲೈಕೆಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಮೂವರು ಸಚಿವರಿಗೆ ಬಡ್ತಿ ನೀಡ­ಲಾಗಿದೆ. ಇನ್ನೊಬ್ಬ ಮುಸ್ಲಿಂ ನಾಯಕ­ನಿಗೆ ಸಚಿವ ಸ್ಥಾನ ನೀಡಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ­ಕೊಂಡು ಹತ್ತಾರು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಕಾಂಗ್ರೆಸ್‌ ತಳಮಳ: ತಳಮಟ್ಟದಲ್ಲಿ ಸಂಘಟನೆಯನ್ನೇ ಹೊಂದಿಲ್ಲದ ಕಾಂಗ್ರೆಸ್‌ಗೆ ಹಣದುಬ್ಬರ ಗಾಯದ ಮೇಲೆ ಬರೆ ಎಳೆಯಲಿದೆ ಎಂದೇ ಹೇಳಲಾಗುತ್ತಿದೆ.

2009ರಲ್ಲಿ ಗೆದ್ದ 22 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಪಕ್ಷದಲ್ಲಿ ಬಣ ರಾಜಕೀಯ ತೀವ್ರವಾಗಿದೆ. ಜೊತೆಗೆ ಕೆಳದ ಬಾರಿ ಗೆದ್ದವರೂ ಈ ಬಾರಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಯ ಲೋಕದಳದೊಂದಿಗಿನ ಮೈತ್ರಿ ಮತ್ತು ಜಾಟ್‌ ಸಮುದಾಯಕ್ಕೆ ಒಬಿಸಿ ಮೀಸಲು ಕೊಡುಗೆ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ ಕೈ ಹಿಡಿಯುವ ನಿರೀಕ್ಷೆ ಇದೆ.

ಬಿಎಸ್‌ಪಿಗೆ ಲಾಭವಾಗುವ ಸಾಧ್ಯತೆ: ಬಿಎಸ್‌ಪಿಗೆ ರಾಜ್ಯದಲ್ಲಿ ಅತ್ಯಂತ ಚುರುಕಾದ ಕಾರ್ಯಕರ್ತರ ಪಡೆ ಇದೆ. ಹಾಗಾಗಿ ಪಕ್ಷ ದೊಡ್ಡ ಸಮಾವೇಶಗಳ ಗೊಡವೆಗೆ ಹೋಗದೆ ತಳಮಟ್ಟದಲ್ಲಿ ಮೌನವಾಗಿ ಕೆಲಸ ಮಾಡುತ್ತಿದೆ.

ಎಸ್‌ಪಿ ಸರ್ಕಾರದ ವೈಫಲ್ಯ ತನಗೆ ವರವಾಗಬಹುದು ಎಂಬ ನಿರೀಕ್ಷೆ ಬಿಎಸ್‌ಪಿಯಲ್ಲಿದೆ. ಮುಸ್ಲಿಮರ ಮತ ಪಡೆಯುವ ಬಗ್ಗೆಯೂ ಪಕ್ಷ ಆಸೆ ಇರಿಸಿಕೊಂಡಿದೆ. ‘ಆಗಾಗ ನಡೆಯುತ್ತಿ­ರುವ ಕೋಮುಗಲಭೆ ಮುಸ್ಲಿಂ ಸಮು­ದಾಯದಲ್ಲಿ ಭೀತಿ ಹುಟ್ಟಿಸಿದೆ. ನಮ್ಮ ಆಡಳಿತದ ಅವಧಿಯಲ್ಲಿ ಒಂದು ಕೋಮು ಗಲಭೆಯೂ ನಡೆದಿಲ್ಲ. ಹಾಗಾಗಿ ಈ ಬಾರಿ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ’ ಎಂದು ಬಿಎಸ್‌ಪಿ ನಾಯಕ ಎಸ್‌.ಪಿ. ಮೌರ್ಯ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂತಹ ಪಕ್ಷವೇ ಮುನ್ನಡೆಯಲ್ಲಿದೆ ಎಂದು ಹೇಳಲಿಕ್ಕಾಗದು. ಹಾಗಾಗಿ ಮುಂದಿನ ದಿನಗಳಲ್ಲಿನ ಪ್ರಚಾರದ ಭರಾಟೆ ಚಿತ್ರಣವನ್ನು ಬದಲಾಯಿಸಬಹುದೇ ಎಂದು ಕಾದು ನೋಡಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.