ನವದೆಹಲಿ (ಪಿಟಿಐ): ಪಕ್ಷದ ಟಿಕೆಟ್‌ಗಾಗಿ ಹಣದ ಬೇಡಿಕೆ ಇಟ್ಟಿದ್ದ ಉತ್ತರ ಪ್ರದೇಶದ ಇಬ್ಬರು ಮುಖಂಡರನ್ನು ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಉಚ್ಚಾಟಿಸುವ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೊಡಲು ಹಣ ಕೇಳಿದ್ದ ಅವಧ್ ವಲಯದ ಸಂಚಾಲಕ ಅರುಣಾ ಸಿಂಗ್ ಮತ್ತು ಹರ್ದೊಯ್ ಖಜಾಂಚಿ ಅಶೋಕ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪಕ್ಷದ ಟಿಕೆಟ್‌ಗೆ ಬದಲಾಗಿ ಹಣ ನೀಡುವಂತೆ ಈ ಇಬ್ಬರು ಕೇಳಿದ್ದರು ಎಂದು ನಮಗೆ ದೂರು ಬಂದಿತ್ತು. ಇದಕ್ಕೆ ನಾವು ಸಾಕ್ಷ್ಯ ಕೇಳಿದ್ದೆವು. ಸಾಕ್ಷ್ಯ ಪರಿಶೀಲಿಸಿದ ಬಳಿಕ ಆರೋಪ ನಿಜವೆಂದು ಸಾಬೀತಾಗಿದೆ. ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ಆದರೆ, ಆರೋಪ ರುಜುವಾತಾದ್ದರಿಂದ ಇಬ್ಬರನ್ನೂ ಪಕ್ಷದಿಂದ ತೆಗೆದು ಹಾಕಿದ್ದೇವೆ’ ಎಂದು ಹೇಳಿದರು.
‘ಪಕ್ಷದ ಟಿಕೆಟ್‌ಗಾಗಿ ಯಾರಾದರೂ ಹಣ ನೀಡಿದ್ದರೆ ಅದನ್ನು ಅವರು ಕಳೆದುಕೊಂಡಂತೆ. ಅಲ್ಲದೇ ಈ ರೀತಿ ಲಂಚ ನೀಡುವ ವ್ಯಕ್ತಿಗೆ ಟಿಕೆಟ್ ಕೂಡ ನೀಡುವುದಿಲ್ಲ’ ಎಂದು ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದರು. ಪಕ್ಷದ ಟಿಕೆಟ್‌ಗೆ ಬದಲಾಗಿ ಹಣ ಕೇಳಲಾಗುತ್ತಿದೆ ಎಂದು ಸೀತಾಪುರದ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಈ ಕುರಿತು ಸುದ್ದಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.