ನವದೆಹಲಿ/ಪಟ್ನಾ (ಐಎಎನ್‌ಎಸ್): ಚಿತ್ರ ನಿರ್ಮಾಪಕ ಪ್ರಕಾಶ್ ಝಾ, ಉದ್ಯಮಿ ಅನಿಲ್ ಕುಮಾರ್ ಶರ್ಮಾ ಮತ್ತು ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರನ್ನು ಒಳಗೊಂಡ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಯು ಭಾನುವಾರ ಬಿಡುಗಡೆ ಮಾಡಿದೆ.
ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಒಂದು ದಿನದ ಹಿಂದೆಯಷ್ಟೇ ಜೆಡಿಯು ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಭಾನುವಾರ ಇನ್ನುಳಿದ 32 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಪ್ರಕಾಶ್ ಝಾ ಪಶ್ಚಿಮ ಚಂಪಾರಣ್ ಲೋಕಸಭೆ ಕ್ಷೇತ್ರ, ಅಮ್ರಪಾಲಿ ಉದ್ಯಮ ಸಮೂಹದ ಅಧ್ಯಕ್ಷ ಅನಿಲ್ ಕುಮಾರ್ ಶರ್ಮಾ ಅವರು ಜೆಹನಾಬಾದ್ ಕ್ಷೇತ್ರ, ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರು ಮಧೇಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮತ್ತೆ ಟಿಕೆಟ್ ಗಿಟ್ಟಿಸಿದ ಹಾಲಿ ಸಂಸದರೆಂದರೆ ಶರದ್ ಯಾದವ್, ರಾಮ್ ಸುಂದರ್ ದಾಸ್, ಅರ್ಜುನ್ ರಾಯ್, ದಿನೇಶ್ ಚಂದ್ರ, ರಂಜನ್ ಪ್ರಸಾದ್ ಯಾದವ್ ಮತ್ತು ಮೀನಾ ಸಿಂಗ್.
ಶರದ್ ಯಾದವ್ ಅವರು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಭ್ಯರ್ಥಿ ಪಪ್ಪು ಯಾದವ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ರಾಮ್ ವಿಲ್ವಾಸ್ ಪಾಸ್ವಾನ್ ವಿರುದ್ಧ ರಾಮ್ ಸುಂದರ್ ದಾಸ್ ಕಣಕ್ಕಿಳಿಯಲಿದ್ದಾರೆ.
ಕಿಶನ್‌ಗಂಜ್‌ದಿಂದ ಅಕ್ತರುಲ್ ಇಮಾನ್, ಮಧುಬನಿಯಿಂದ ಗುಲಾಮ್ ಗೌಸ್ ಮತ್ತು ಭಾಗಲ್‌ಪುರದಿಂದ ಅಬು ಕೈಸರ್ ಅವರು ಜೆಡಿಯುನಿಂದ ಕಣಕ್ಕಿಳಿಯಲಿರುವ ಹೊಸ ಮುಖಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.