ADVERTISEMENT

ಪಶ್ಚಿಮ ಬಂಗಾಳ | ಖಾಸಗಿತನಕ್ಕೆ ಧಕ್ಕೆ: ಬಿಜೆಪಿ ಅಭ್ಯರ್ಥಿ ದೂರು

ಪಿಟಿಐ
Published 29 ಮಾರ್ಚ್ 2024, 14:13 IST
Last Updated 29 ಮಾರ್ಚ್ 2024, 14:13 IST
ಪಶ್ಚಿಮ ಬಂಗಾಳದ ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರನ್ನು ಪ್ರಚಾರದ ವೇಳೆ ಪಕ್ಷದ ಕಾರ್ಯಕರ್ತರು ಮುತ್ತಿಕೊಂಡಿರುವುದು   
ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರನ್ನು ಪ್ರಚಾರದ ವೇಳೆ ಪಕ್ಷದ ಕಾರ್ಯಕರ್ತರು ಮುತ್ತಿಕೊಂಡಿರುವುದು    ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರು ಟಿಎಂಸಿ ಮುಖಂಡ ದೇವಾಂಶು ಭಟ್ಟಾಚಾರ್ಯ ತಮ್ಮ ‘ಖಾಸಗಿತನ’ಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೂ ಪತ್ರ ರವಾನಿಸಿರುವ ರೇಖಾ, ತಮ್ಲುಕ್ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಹಾಗೂ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥರಾಗಿರುವ ಭಟ್ಟಾಚಾರ್ಯ ಅವರು ತಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಾನು ಬಿಜೆಪಿ ಅಭ್ಯರ್ಥಿಯಾದಾಗಿನಿಂದ ರಾಜಕೀಯ ವಿರೋಧವನ್ನು ಎದುರಿಸುತ್ತಿರುವ ಬಗ್ಗೆ ವಕೀಲರ ಮೂಲಕ ರೇಖಾ ಅವರು ದೂರಿನಲ್ಲಿ ದಾಖಲಿಸಿದ್ದಾರೆ.

ADVERTISEMENT

‘ದೇವಾಂಶು ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ ನನ್ನ ಕಕ್ಷಿದಾರರ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ‘ಸ್ವಸ್ಥ್ಯ ಸಾಥಿ’ ಯೋಜನೆಯ ವಿವರಗಳು, ‘ದೌರೆ ಸರ್ಕಾರ್’ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಕಕ್ಷಿದಾರರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಅವರ ಘನತೆಗೆ ಧಕ್ಕೆ ತಂದಿದೆ’ ಎಂದು ರೇಖಾ ಅವರ ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮುಖಂಡ ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರ ವಿರುದ್ಧ ಧ್ವನಿ ಎತ್ತುವ ಮೂಲಕ ಜನಪ್ರಿಯರಾಗಿದ್ದ ರೇಖಾ ಅವರಿಗೆ ಬಿಜೆಪಿ ಬಶೀರ್‌ಹಾಟ್ ಕ್ಷೇತ್ರದ ಟಿಕೆಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೇಖಾ ಅವರನ್ನು ‘ಶಕ್ತಿ ಸ್ವರೂಪ’ ಎಂದು ಕರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.