ADVERTISEMENT

LSPolls: ಸುಪ್ರಿಯಾ ಶ್ರೀನೇತ್‌ ಕೈತಪ್ಪಿದ ಟಿಕೆಟ್

ಪಿಟಿಐ
Published 28 ಮಾರ್ಚ್ 2024, 21:18 IST
Last Updated 28 ಮಾರ್ಚ್ 2024, 21:18 IST
ಸುಪ್ರಿಯಾ ಶ್ರೀನೇತ್‌
ಸುಪ್ರಿಯಾ ಶ್ರೀನೇತ್‌   

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ಗುರುವಾರ ತನ್ನ ಅಭ್ಯರ್ಥಿಗಳ ಎಂಟನೇ ಪಟ್ಟಿ ಪ್ರಕಟಿಸಿದ್ದು, 14 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಘೋಷಿಸಿದೆ.

ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ರಾವ್ ಯಾದವೇಂದ್ರ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಮಧ್ಯಪ್ರದೇಶದ
ವಿದಿಶಾ ಕ್ಷೇತ್ರಕ್ಕೆ ಪ್ರತಾಪ್‌ ಭಾನು ಶರ್ಮಾ ಅವರ ಹೆಸರು ಪ್ರಕಟಿಸಿದೆ. ಬಿಜೆಪಿಯು ಇಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಆಖಾಡಕ್ಕೆ ಇಳಿಸಿದೆ.

ಉತ್ತರ ಪ್ರದೇಶದಲ್ಲಿ ಗಾಜಿಯಾಬಾದ್ (ಡಾಲಿ ಶರ್ಮಾ), ಸೀತಾಪುರ (ನಕುಲ್ ದುಬೆ), ಬುಲಂದ್‌ಶಹರ್ (ಶಿವರಾಂ ವಾಲ್ಮೀಕಿ) ಮತ್ತು ಮಹಾರಾಜಾಗಂಜ್ (ವೀರೇಂದ್ರ ಚೌಧರಿ) ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. 

ADVERTISEMENT

ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರು ಮಹಾರಾಜಾಗಂಜ್ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರ ಬದಲು ಚೌಧರಿಗೆ ಅವಕಾಶ ನೀಡಿದೆ. ಸುಪ್ರಿಯಾ ಅವರು 2019ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಕುರಿತು ಸುಪ್ರಿಯಾ ನೀಡಿದ್ದ ಹೇಳಿಕೆ ಈಚೆಗೆ ವಿವಾದಕ್ಕೆ ಕಾರಣವಾಗಿತ್ತು. ತೆಲಂಗಾಣದ ನಾಲ್ಕು, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನ ತಲಾ ಮೂರು ಕ್ಷೇತ್ರಗಳಿಗೆ
ಅಭ್ಯರ್ಥಿಗಳನ್ನು ಘೋಷಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ
ಕೆ.ಸಿ.ವೇಣುಗೋಪಾಲ್‌ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಗುರುವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ (ಸಿಇಸಿ) ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.