ADVERTISEMENT

LS Polls 2024: ‘ಕೈ’ ಭದ್ರಕೋಟೆ ವಶಕ್ಕೆ ಬಿಜೆಪಿ ಹರಸಾಹಸ

ರಾಯ್‌ಬರೇಲಿ: ರಾಹುಲ್‌ ಗಾಂಧಿಗೆ ಸವಾಲೊಡ್ಡಿರುವ ದಿನೇಶ್‌ ಪ್ರತಾಪ್

ಪಿಟಿಐ
Published 18 ಮೇ 2024, 19:20 IST
Last Updated 18 ಮೇ 2024, 19:20 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಅಯೋಧ್ಯೆ ರಾಮಮಂದಿರ ನಿರ್ಮಾಣವು ಬಿಜೆಪಿಗೆ ಮತಗಳನ್ನು ತಂದುಕೊಡಲಿದೆ ಎಂದು ರಾಯ್‌ಬರೇಲಿಯ ಬಿಜೆ‍ಪಿ ಕಾರ್ಯಕರ್ತರು ನಂಬಿದ್ದಾರೆ. ಆದರೂ ಗೆಲುವು ಸಾಧಿಸಬೇಕಾದರೆ ದಿನೇಶ್‌ ಪ್ರತಾಪ್‌ ಸಿಂಗ್ ಅವರು ಭಗೀರಥ ಪ್ರಯತ್ನ ನಡೆಸಬೇಕು ಎಂಬುದನ್ನು ಒಪ್ಪಿಕೊಳ್ಳುತ್ತಾರೆ

ರಾಯ್‌ಬರೇಲಿ (ಪಿಟಿಐ): ಅಯೋಧ್ಯೆ ರಾಮಮಂದಿರ, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಸರ್ಕಾರದ ಉಚಿತ ಪಡಿತರ, ಬಡವರಿಗೆ ಮನೆ, ಬೀಡಾಡಿ ದನಗಳ ಹಾವಳಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂಬ ಕಾಂಗ್ರೆಸ್‌ನ ಆರೋಪ... ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಚರ್ಚೆಯಲ್ಲಿರುವ ವಿಚಾರಗಳು ಇವು. ಆದರೆ ರಾಯ್‌ಬರೇಲಿಯಲ್ಲಿ ಮಾತ್ರ ‘ಗಾಂಧಿ ಕುಟುಂಬ’ದ ಕುರಿತ ಚರ್ಚೆ ಈ ಎಲ್ಲ ವಿಷಯಗಳನ್ನೂ ಮೀರಿಸಿದೆ.

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಹೊಂದಿರುವ ಪ್ರಾಬಲ್ಯವನ್ನು ಇದು ಸೂಚಿಸುತ್ತದೆ. ಇದುವರೆಗೆ ಕಾಂಗ್ರೆಸ್‌ ಇಲ್ಲಿ ಮೂರು ಬಾರಿ ಮಾತ್ರ (1977, 1996 ಮತ್ತು 1998) ಸೋಲು ಅನುಭವಿಸಿದೆ. 2004 ರಿಂದ ಸತತ ನಾಲ್ಕು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಸೋನಿಯಾ ಗಾಂಧಿ ಅವರು ಇದೀಗ ಬೇಟನ್‌ಅನ್ನು ಪುತ್ರ ರಾಹುಲ್‌ ಗಾಂಧಿಗೆ ಹಸ್ತಾಂತರಿಸಿದ್ದಾರೆ.

ADVERTISEMENT

ಕಳೆದ ಬಾರಿ ಅಮೇಠಿಯಲ್ಲಿ ಸ್ಮೃತಿ ಇರಾನಿ ಎದುರು ಸೋತಿದ್ದ ರಾಹುಲ್‌ ಈ ಸಲ ರಾಯ್‌ಬರೇಲಿಯಲ್ಲಿ ಬಿಜೆಪಿಯ ದಿನೇಶ್‌ ಪ್ರತಾಪ್‌ ಸಿಂಗ್‌ ಎದುರು ಪೈಪೋಟಿಗಿಳಿದಿದ್ದಾರೆ. ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿರುವ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಈ ಬಾರಿ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಆದ್ದರಿಂದ ಈ ಕ್ಷೇತ್ರ ಇಡೀ ದೇಶದ ಕುತೂಹಲ ಕೆರಳಿಸಿದೆ. 

‘ಯಹಾ ತೋ ಪಂಜಾ ಹೆ, ಯೆ ಗಾಂಧಿ ಫ್ಯಾಮಿಲಿ ಕಾ ಗರ್‌ ಹೆ. ಕೋಯಿ ಬಿ ಕ್ಯಾಂಡಿಡೇಟ್‌ ಹೊ, ಗಾಂಧಿ ಪರಿವಾರ್‌ ಜೀತೇಗಾ. ಯಹಾ ಸಿರ್ಫ್‌ ಮಾರ್ಜಿನ್‌ ಕಾ ಬಾತ್‌ ಹೆ’ (ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಕಾರಣ ಇಲ್ಲಿ ಕಾಂಗ್ರೆಸ್‌ನ ‘ಹಸ್ತ’ ಗುರುತು ಚಾಲ್ತಿಯಲ್ಲಿದೆ.  ಯಾರೇ ಅಭ್ಯರ್ಥಿಯಾದರೂ, ಗಾಂಧಿ ಕುಟುಂಬದವರು ಗೆಲ್ಲುತ್ತಾರೆ. ಇಲ್ಲಿ ಪ್ರಶ್ನೆಯಿರುವುದು ಗೆಲುವಿನ ಅಂತರದ ಬಗ್ಗೆ ಮಾತ್ರ) ಎಂಬುದು ಸೈಕಲ್‌ ರಿಕ್ಷಾ ಚಾಲಕ ಸೋನು ಪಾಂಡೆ ಅವರ ಹೇಳಿಕೆ.

ಆಟಿಕೆಗಳ ಅಂಗಡಿ ಇಟ್ಟುಕೊಂಡಿರುವ ರವೀಂದ್ರ ಸಿಂಗ್ ಈ ಮಾತಿಗೆ ಒಪ್ಪಿಗೆ ಸೂಚಿಸಿ, ರಾಹುಲ್‌ ಗಾಂಧಿ ಗೆಲುವಿನ ನಗು ಬೀರುವರು ಎನ್ನುತ್ತಾರೆ. ‘ಕಳೆದ ಬಾರಿ ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದರೂ, ಸೋನಿಯಾ ಗಾಂಧಿ ಅವರು 1,67,000 ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ರಾಹುಲ್‌ ಕೂಡಾ ಸುಲಭ ಗೆಲುವು ಸಾಧಿಸುವರು’ ಎಂದು ವಿಶ್ವಾಸ ವ್ಯಕ್ತಪಡಿಸುವರು.

ಆದರೆ ರಾಮಮಂದಿರ ನಿರ್ಮಾಣವು ಬಿಜೆಪಿಗೆ ಮತಗಳನ್ನು ತಂದುಕೊಡಲಿದೆ ಎಂದು ಬಿಜೆ‍ಪಿ ಕಾರ್ಯಕರ್ತರು ನಂಬಿದ್ದಾರೆ. ಆದರೂ ಗೆಲುವು ಸಾಧಿಸಬೇಕಾದರೆ ದಿನೇಶ್‌ ಪ್ರತಾಪ್‌  ಅವರು ಭಗೀರಥ ಪ್ರಯತ್ನ ನಡೆಸಬೇಕು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. 

‘ಮೋದಿ ಅವರ ಆಡಳಿತದಲ್ಲಿ ರಾಮಮಂದಿರ ನಿರ್ಮಾಣ ಆಗಿದೆ. ಆದ್ದರಿಂದ ನನ್ನ ಮತ ಬಿಜೆಪಿಗೆ’ ಎಂದು ಟ್ಯಾಕ್ಸಿ ಚಾಲಕ ಅಲೋಕ್‌ ಸಿಂಗ್‌ ನೇರವಾಗಿ ಹೇಳಿದರು. ‘ನಾನು ಬಿಜೆಪಿ ಬೆಂಬಲಿಗ. ಗಾಂಧಿ ಕುಟುಂಬ ಈ ಕ್ಷೇತ್ರವನ್ನು ಸುದೀರ್ಘ ಕಾಲ ಪ್ರತಿನಿಧಿಸಿದೆಯಾದರೂ ಆಗಬೇಕಾದ ಅಭಿವೃದ್ಧಿ ಆಗಿಲ್ಲ. ಆದರೂ ರಾಹುಲ್‌ ಗೆಲುವಿನ ಸಾಧ್ಯತೆ ಶೇ 99 ರಷ್ಟಿದೆ’ ಎನ್ನುವರು.

‘ನಮಗೆ ಉಚಿತ ಪಡಿತರ ಸಿಗುತ್ತಿದೆ. ಸರ್ಕಾರ ಗಟ್ಟಿಮುಟ್ಟಾದ ಮನೆ ಕೂಡಾ ನಿರ್ಮಿಸಿಕೊಟ್ಟಿದೆ. ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ ನನ್ನ ಮತ ಬಿಜೆಪಿಗೆ’ ಎಂಬುದು ಸ್ಥಳೀಯ ನಿವಾಸಿ ಹರಿಲಾಲ್‌ ಅವರ ಮಾತು. ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ನಾಳೆ ಮತದಾನ ನಡೆಯಲಿದೆ. 

ದಿನೇಶ್‌ ಪ್ರತಾಪ್‌ ಸಿಂಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.