ADVERTISEMENT

LS polls | ವಿಮಾನ, ಹೆಲಿಕಾಪ್ಟರ್‌ ಬಾಡಿಗೆ ದುಬಾರಿ

ಪಿಟಿಐ
Published 14 ಏಪ್ರಿಲ್ 2024, 23:30 IST
Last Updated 14 ಏಪ್ರಿಲ್ 2024, 23:30 IST
......
......   

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ ಶೇ 40ರಷ್ಟು ಬೇಡಿಕೆ ಹೆಚ್ಚಳವಾಗಿದೆ ಎಂದು ವಿಮಾನಯಾನ ಕ್ಷೇತ್ರದ ಪರಿಣತರು ತಿಳಿಸಿದ್ದಾರೆ.

ಸದ್ಯ ಚಾರ್ಟರ್ಡ್‌ ಮಾನಗಳಿಗೆ ಪ್ರತಿ ಗಂಟೆಗೆ ಬಾಡಿಗೆ ದರವು ₹4.5 ಲಕ್ಷದಿಂದ ₹5.25 ಲಕ್ಷ ಇದ್ದರೆ, ಹೆಲಿಕಾಪ್ಟರ್‌ಗಳಿಗೆ ₹1.5 ಲಕ್ಷದಿಂದ ₹1.7 ಲಕ್ಷ ಇದೆ. ಈ ಬಾರಿ ವಿಮಾನಯಾನ ಕಂಪನಿಗಳು ಶೇ 15ರಿಂದ 20ರಷ್ಟು ಆದಾಯಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಸಾಮಾನ್ಯ ದಿನಗಳು ಹಾಗೂ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಲಭ್ಯತೆ ಕಡಿಮೆಯಿದೆ. ಹಾಗಾಗಿ, ಕೆಲವು ಕಂಪನಿಗಳು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒಪ್ಪಂದದ ಮೇರೆಗೆ ಗುತ್ತಿಗೆ ಪಡೆಯಲು ಮುಂದಾಗಿವೆ ಎಂದು ತಿಳಿಸಿದ್ದಾರೆ.

ADVERTISEMENT

‘ಹೆಲಿಕಾಪ್ಟರ್‌ಗಳಿಗೆ ಶೇ 25ರಷ್ಟು ಬೇಡಿಕೆ ಹೆಚ್ಚಳವಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ಹೆಲಿಕಾಪ್ಟರ್‌ಗಳ ಲಭ್ಯತೆ ಕಡಿಮೆಯಿದೆ’ ಎಂದು ರೋಟರಿ ವಿಂಗ್‌ ಸೊಸೈಟಿ ಆಫ್‌ ಇಂಡಿಯಾದ ಅಧ್ಯಕ್ಷ (ಪಶ್ಚಿಮ ವಿಭಾಗ) ಕ್ಯಾಪ್ಟನ್‌ ಉದಯ್‌ ಗೆಲ್ಲಿ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಕೆಲವು ದಿನಗಳವರೆಗೆ ಹೆಲಿಕಾಪ್ಟರ್‌ಗಳನ್ನು ಬಾಡಿಗೆ ಪಡೆಯುವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು, ಅವುಗಳ ಬಳಕೆಯ ಆಧಾರದ ಮೇಲೆ ಗಂಟೆ ಲೆಕ್ಕದಲ್ಲಿ ಹಣ ಪಾವತಿಸುತ್ತಾರೆ’ ಎಂದು ವಿವರಿಸಿದ್ದಾರೆ.

ಎಷ್ಟು ಮಂದಿ ಪ್ರಯಾಣ?: ‘ಸಿಂಗಲ್‌ ಎಂಜಿನ್‌ ಹೆಲಿಕಾಪ್ಟರ್‌ಗೆ ಪ್ರತಿ ಗಂಟೆಗೆ ₹80 ಸಾವಿರದಿಂದ ₹90 ಸಾವಿರ ಬಾಡಿಗೆ ಇದೆ. ಇದರಲ್ಲಿ ಏಳು ಮಂದಿ ಪ್ರಯಾಣಿಸಬಹುದಾಗಿದೆ. ಡಬಲ್ ಎಂಜಿನ್‌ ಹೊಂದಿರುವ ಹೆಲಿಕಾಪ್ಟರ್‌ಗೆ ₹1.5 ಲಕ್ಷದಿಂದ ₹1.7 ಲಕ್ಷ ಬಾಡಿಗೆ ದರ ಇದೆ. ಇದರಲ್ಲಿ 12 ಜನರು ಪ್ರಯಾಣಿಸಬಹುದಾಗಿದೆ’ ಎಂದು ಉದಯ್‌ ಗೆಲ್ಲಿ ತಿಳಿಸಿದ್ದಾರೆ.

‘ಸದ್ಯ ಸಿಂಗಲ್‌ ಎಂಜಿನ್‌ ಹೆಲಿಕಾಪ್ಟರ್‌ನ ಬಾಡಿಗೆ ದರ ₹1.5 ಲಕ್ಷಕ್ಕೆ ಮುಟ್ಟಿದ್ದರೆ, ಡಬಲ್‌ ಎಂಜಿನ್‌ ಹೆಲಿಕಾಪ್ಟರ್‌ನ ಬಾಡಿಗೆಯು ₹3.5 ಲಕ್ಷಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

‘ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚಾರ್ಟರ್ಡ್ ವಿಮಾನಗಳಿಗೆ ಶೇ 30ರಿಂದ 40ರಷ್ಟು ಬೇಡಿಕೆ ಹೆಚ್ಚಳವಾಗಿದೆ’ ಎಂದು ವಾಣಿಜ್ಯ ವಿಮಾನಗಳ ನಿರ್ವಾಹಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್‌ ಆರ್‌.ಕೆ. ಬಾಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.