ADVERTISEMENT

ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ

ಪಿಟಿಐ
Published 3 ಮೇ 2024, 15:32 IST
Last Updated 3 ಮೇ 2024, 15:32 IST
   

ಭೋಪಾಲ್/ರಾಜ್‌ಕೋಟ್: ಮಧ್ಯಪ್ರದೇಶದ ಬಿಜೆಪಿ ನಾಯಕಿ ಇಮರ್ತಿ ದೇವಿ ಅವರ ಕುರಿತ ಮಾನಹಾನಿಕರ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಗ್ವಾಲಿಯರ್ ಜಿಲ್ಲೆಯ ದಬ್ರಾ ಶಾಸಕಿ ಇಮರ್ತಿ ದೇವಿ ಅವರದ್ದು ಎನ್ನಲಾದ ಚುನಾವಣಾ ಪ್ರಚಾರದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅದರ ಬಗ್ಗೆ ಪ್ರತಿಕ್ರಿಯಿಸಿದ್ದ ಪಟ್ವಾರಿ, ‘ಇಮರ್ತಿ’ (ಸಿಹಿ ತಿನಿಸು) ಎನ್ನುವ ಪದ ಬಳಸಿ ಮಾತನಾಡಿದ್ದರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಬಿಜೆಪಿ ನಾಯಕರು ಅದನ್ನು ಖಂಡಿಸಿದ್ದರು. ‘ದಲಿತರನ್ನು, ಅದರಲ್ಲೂ ಮಹಿಳೆಯರನ್ನು, ಅವಮಾನಿಸುವುದು ಕಾಂಗ್ರೆಸ್ ಮನಃಸ್ಥಿತಿ’ ಎಂದು ಟೀಕಿಸಿದ್ದರು.   

‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಪ್ರಶ್ನೆಗೆ ಉತ್ತರಿಸುವುದರಿಂದ ತಪ್ಪಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಇಮರ್ತಿ ನನ್ನ ಹಿರಿಯ ಸೋದರಿ. ಹಿರಿಯ ಸೋದರಿ ತಾಯಿಗೆ ಸಮಾನ. ಆದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಪಟ್ವಾರಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಆದಾಗ್ಯೂ, ಇಮರ್ತಿ ದೇವಿ ಈ ಸಂಬಂಧ ದಬ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಪೊಲೀಸರು ಜಿತು ‍ಪಟ್ವಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಗಾಂಧಿ ಕುರಿತ ಹೇಳಿಕೆಗೆ ಖಂಡನೆ: ಗುಜರಾತ್‌ನ ಕಾಂಗ್ರೆಸ್ ಮಾಜಿ ಶಾಸಕ ಇಂದ್ರಾನಿಲ್ ರಾಜ್‌ಗುರು ಮಹಾತ್ಮ ಗಾಂಧಿ ಅವರ ಬಗ್ಗೆ ಆಡಿದ್ದಾರೆನ್ನಲಾದ ಮಾತಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅವರು ಗಾಂಧಿ ಬಗ್ಗೆ ‘ಕುತಂತ್ರ’ ಎನ್ನುವ ಪದ ಬಳಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ರಾಜ್‌ಕೋಟ್‌ನ ಮಾಜಿ ಶಾಸಕರಾದ ರಾಜ್‌ಗುರು ಮೇ 1ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಗಾಂಧೀಜಿ ಸ್ವಲ್ಪಮಟ್ಟಿಗೆ ಕುತಂತ್ರಿಯಾಗಿದ್ದರು. ಆದರೆ, ರಾಹುಲ್ ಗಾಂಧಿ ಶುದ್ಧ ಮನಸ್ಸಿನ, ನೇರವಂತಿಕೆಯ ವ್ಯಕ್ತಿಯಾಗಿದ್ದಾರೆ. ಜನ ಅವರಲ್ಲಿ ಮುಂದಿನ ಮಹಾತ್ಮ ಗಾಂಧಿಯನ್ನು ಕಾಣಲಿದ್ದಾರೆ’ ಎಂದಿದ್ದರು. 

ರಾಜ್‌ಗುರು ಹೇಳಿಕೆ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ‘ಗಾಂಧಿ ನಮ್ಮ ರಾಷ್ಟ್ರಪಿತ, ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದಂಥವರು. ಮಹಾತ್ಮ ಗಾಂಧಿ ಕುರಿತ ಅಂತಹ ಹೇಳಿಕೆಗಳಿಗೆ ಜನ ಕಾಂಗ್ರೆಸ್ ಅನ್ನು ಕ್ಷಮಿಸುವುದಿಲ್ಲ’ ಎಂದು ಗುಜರಾತ್ ಬಿಜೆಪಿ ಘಟಕದ ಉಪಾಧ್ಯಕ್ಷ ಭರತ್ ಬೊಘಾರಾ ಹೇಳಿದ್ದಾರೆ. ಆದರೆ, ರಾಜ್‌ಗುರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ‘ನಾನು ಹೇಳಿರುವ ವಿಚಾರ ಚರಿತ್ರೆಯಲ್ಲೇ ದಾಖಲಾಗಿದೆ. ನಾನು ‘ಚತುರ’ ಎನ್ನುವ ಪದ ಬಳಸಲು ಬಯಸಿದ್ದೆ. ಆದರೆ, ಅದರ ಸಮಾನಾರ್ಥಕ ಪದ ಬಳಸಿದ್ದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.