ADVERTISEMENT

LS Poll: ಇಂಡಿಯಾ ಕೂಟದ ಎನ್‌ಸಿ, ಪಿಡಿಪಿ ಕಾಶ್ಮೀರದಲ್ಲಿ ಪ್ರತ್ಯೇಕ ಸ್ಪರ್ಧೆ

ಪಿಟಿಐ
Published 4 ಏಪ್ರಿಲ್ 2024, 4:27 IST
Last Updated 4 ಏಪ್ರಿಲ್ 2024, 4:27 IST
ಪಿಡಿಪಿ ಚಿಹ್ನೆ– ಟ್ವಿಟರ್‌ ಚಿತ್ರ
ಪಿಡಿಪಿ ಚಿಹ್ನೆ– ಟ್ವಿಟರ್‌ ಚಿತ್ರ   

ಶ್ರೀನಗರ: ‘ಇಂಡಿಯಾ’ ಕೂಟದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ತಿಳಿಸಿವೆ.

ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಒಮ್ಮತ ಮೂಡದಿದ್ದರಿಂದ ಎರಡು ಪಕ್ಷಗಳು ಸ್ಪರ್ಧೆ ಮಾಡಲಿವೆ. 

ಎನ್‌ಸಿ ವರಿಷ್ಠ ಫಾರೂಕ್ ಅಬ್ದುಲ್ಲಾ ತಮಗೆ ಯಾವುದೇ ಆಯ್ಕೆಯನ್ನು ಬಿಡದೇ ಇರುವುದರಿಂದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. 

ADVERTISEMENT

ಈಗಾಗಲೇ ಎನ್‌ಸಿ ಎಲ್ಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದೆ.

‘ಫಾರೂಕ್ ಅಬ್ದುಲ್ಲಾ ನಮ್ಮ ಹಿರಿಯ ನಾಯಕರಾಗಿದ್ದರಿಂದ ಸ್ಥಾನ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಮುಂಬೈನಲ್ಲಿ ನಡೆದ ‘ಇಂಡಿಯಾ’ ಕೂಟದ ಸಭೆಯಲ್ಲಿ ನಾನು ಅವರಿಗೆ ಸೂಚಿಸಿದ್ದೆ. ಪಕ್ಷದ ಹಿತಾಸಕ್ತಿ ಬದಿಗಿಟ್ಟು ಅವರು ನ್ಯಾಯ ಸಲ್ಲಿಸುತ್ತಾರೆಂದು ನಾನು ಭಾವಿಸಿದ್ದೆ. ಆದರೆ, ಕಾಶ್ಮೀರದ ಮೂರು ಸ್ಥಾನಗಳಲ್ಲಿಯೂ ಸ್ಪರ್ಧಿಸುವ ಏಕಪಕ್ಷೀಯ ನಿರ್ಧಾರವನ್ನು ಅವರು ಕೈಗೊಂಡರು. ಪಿಡಿಪಿಗೆ ಜನಬೆಂಬಲವಿಲ್ಲ ಮತ್ತು ಪಕ್ಷ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಒಮರ್ ಹೇಳುವ ಮೂಲಕ ನಮಗೆ ಅವಮಾನ ಮಾಡಿದ್ದಾರೆ’ ಎಂದು ಮೆಹಬೂಬಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.