ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ದಿನಕ್ಕೊಂದು ಹೊಸ ಹೆಸರುಗಳು ಕೇಳಿ ಬರುತ್ತಿವೆ. ಈವರೆಗೆ ಕೇಳಿ ಬರುತ್ತಿದ್ದ ಕೇಂದ್ರ ಸಚಿವ ಚಿರಂಜೀವಿ ಹೆಸರು ಬದಲಾಗಿ ಈಗ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೆಸರು ಕೇಳಿ ಬರುತ್ತಿದೆ.
‘ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಟ ಚಿರಂಜೀವಿ ಹೆಸರು ಕೇಳಿ ಬಂದಾಗಲೇ ರಾಹುಲ್ ಹೆಸರೂ ಪ್ರಸ್ತಾಪವಾಗಿತ್ತು. ಆದರೆ, ರಾಹುಲ್ ಅವರಿಗಿಂತ ಚಿರಂಜೀವಿಅವರೇ ಕ್ಷೇತ್ರಕ್ಕೆ ಹೆಚ್ಚು ಹತ್ತಿರ ಮತ್ತು ಪರಿಚಿತರಾಗಿದ್ದಾರೆ. ಈ ಕಾರಣದಿಂದಲೇ ಚಿರಂಜೀವಿಯವರಿಗೆ ಪ್ರಥಮ ಆದ್ಯತೆ ನೀಡಲಾಯಿತು. ಆದರೆ ಅಭ್ಯರ್ಥಿಗಳ ನಿಖರ ಆಯ್ಕೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈಗ ಮತ್ತೆ ರಾಹುಲ್ ಗಾಂಧಿಯವರ ಹೆಸರು ಚಾಲ್ತಿಗೆ ಬಂದಿದೆ’ ಎಂದು ಮೂಲಗಳು ತಿಳಿಸಿವೆ.
ಉತ್ತರ ಭಾರತದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಾಬಲ್ಯ ಮೆರೆಯುತ್ತಿದ್ದು, ಅಲ್ಲಿ ಚುನಾವಣೆ ಎದುರಿಸುವುದು ಸವಾಲಾಗಬಹುದು ಎಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ಅದಕ್ಕೆ ದಕ್ಷಿಣ ಭಾರತದ ಸುಭದ್ರ ಕಾಂಗ್ರೆಸ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸತತ ಗೆಲುವು ಸಾಧಿಸಿದ್ದು, ಇದರಿಂದಾಗಿ ಅವರು ಈ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.
‘ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಲೆಂದೇ ಚುನಾವಣೆ ಘೋಷಣೆಯಾಗುವ ಮುಂಚಿನ ಮೂರು ತಿಂಗಳುಗಳಿಂದ ತರಾತುರಿಯಲ್ಲಿ ಹಲವಾರು ಕಾರ್ಯಕ್ರಮ ಕೈಗೊಂಡ ವೀರಪ್ಪ ಮೊಯಿಲಿಯವರು ಮತದಾರರನ್ನು ಒಲಿಸಿಕೊಳ್ಳಲು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ನೀಡಿದರು.
ಇಷ್ಟೆಲ್ಲ ಮಾಡಿರುವಾಗ ಪಕ್ಷದ ಹೈಕಮಾಂಡ್ ತಮಗೆ ಎರಡನೇ ಬಾರಿ ಟಿಕೆಟ್ ನೀಡಲೇಬೇಕೆಂದು ಮೊಯಿಲಿ ಪಟ್ಟು ಹಿಡಿದಿದ್ದಾರೆ. ಪಕ್ಷದ ಉನ್ನತ ಮಟ್ಟದ ನಾಯಕರ ಸಂಪರ್ಕದಲ್ಲಿರುವ ಅವರು ಎರಡನೇ ಪಟ್ಟಿಯಲ್ಲಿ ಹೆಸರಿರುವಂತೆ ಮಾಡಲು ಶತಪ್ರಯತ್ನ ನಡೆಸಿದ್ದಾರೆ’ ಎಂದು ರಾಜಕೀಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.