ಶೃಂಗೇರಿ: ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟುಮಾಡಿರುವ ಭಯೋತ್ಪಾದನೆ, ನಕ್ಸಲ್ ಸಮಸ್ಯೆ, ಗಡಿಭದ್ರತೆ ಮುಂತಾದ ವಿಷಯಗಳಲ್ಲಿ ನಿರ್ಣಾಯಕ ಕ್ರಮಕೈಗೊಂಡು ದೇಶವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಮರ್ಥ ನಾಯಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಜನತೆ ಬಿಜೆಪಿಗೆ ಮತ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಮೆಣಸೆಯ ಮಹಾಬಲ ಭೀಡೆ ಅವರ ಮನೆ ಅಂಗಳದಲ್ಲಿ ಸೋಮವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಅರವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸ್ವಾತಂತ್ರ್ಯಾ ನಂತರದ ಎಲ್ಲಾ ಸಮಸ್ಯೆಗಳನ್ನು ಹಾಗಯೇ ಉಳಿಸಿಕೊಂಡು ಬಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರದ ಆಡಳಿತ ನೀಡಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಲುಕಿದೆ. ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ, ಅಡಿಕೆ ವಿಷಕಾರಿ ಎಂದು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ವಿವಾದ ಸೃಷ್ಠಿಸಿದೆ. ಇದರೊಂದಿಗೆ ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಜನತೆ ಬಿಜೆಪಿಯನ್ನು ಬೆಂಬಲಿಸಬೇಕೆಂದು ಅವರು ಕೋರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಪ್ರಸ್ತುತ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಮಹಾ ಚುನಾವಣೆಯಾಗಿದೆ. ಇದುವರೆಗಿನ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಕೊನೆಗೊಳಿಸಿ ದೇಶವನ್ನು ವಿಶ್ವದಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸುವಂತೆ ಮಾಡಲು ಬಿಜೆಪಿಯನ್ನು ಬೆಂಬಲಿಸುವಂತೆ ಅವರು ಇದೇ ಸಂದರ್ಭ ಮನವಿ ಮಾಡಿದರು.
ಮೆಣಸೆ ಶಕ್ತಿ ಕೇಂದ್ರದ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದೂರು, ಜಿಲ್ಲಾ ಪಂಚಾಯತಿ ಸದಸ್ಯ ಬಿ. ಶಿವಶಂಕರ್, ರಂಗನಾಥ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೋಭಾ ಅನಂತಯ್ಯ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶಾರದಾ ವಿಶ್ವನಾಥ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಚ್.ಎಸ್. ನಟೇಶ್, ಎ.ಎಸ್. ನಯನ, ಕಚ್ಚೋಡಿ ಶ್ರೀನಿವಾಸ್, ಗೇರುಬೈಲು ಶಂಕರಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.