ಮಡಿಕೇರಿ: ವಿದ್ಯುನ್ಮಾನ ಮತ ಯಂತ್ರದ ಮಂದಗತಿಯ ಕಾರ್ಯನಿರ್ವಹಣೆ ವಿರೋಧಿಸಿ, ಮತದಾರರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಮತದಾರರ ಮೇಲೆ ಕೇಂದ್ರೀಯ ಮೀಸಲು ಪಡೆಯ ಪೊಲೀಸರು ಲಾಠಿ ಬೀಸಿದ್ದಾರೆ. ಲಾಠಿ ಏಟಿನಿಂದ ಗಾಯಗೊಂಡ ಕೆಲವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮತಯಂತ್ರ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಸಾಕಷ್ಟು ಮಂದಿ ಉದ್ದನೆಯ ಸಾಲಿನಲ್ಲಿ ನಿಂತು ಬಳಲಿದರು. ಕನಿಷ್ಠ ಪಕ್ಷ ಕುಡಿಯುವ ನೀರಿನ ಸೌಕರ್ಯವನ್ನೂ ಒದಗಿಸಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಕಂಡ ಪೊಲೀಸರು ಸ್ಥಳಕ್ಕೆ ಕೇಂದ್ರೀಯ ಮೀಸಲು ಪಡೆಯ ತುಕಡಿಯನ್ನು ಕರೆಸಿದರು. ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಸಾಲಿನಲ್ಲಿ ನಿಂತಿದ್ದವರ ಮೇಲೆ ಏಕಾಏಕಿ ಲಾಠಿ ಬೀಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು. ನಂತರ, ಪೊಲೀಸರು ಮಧ್ಯ ಪ್ರವೇಶಿಸಿ ಮತದಾರರೊಂದಿಗೆ ಮಾತುಕತೆ ನಡೆಸಿದರು.
ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊರ ಕಳಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಸಿಆರ್‌ಪಿಎಫ್ ಸಿಬ್ಬಂದಿ ತೆರಳಿದ ನಂತರ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.