ADVERTISEMENT

ಬೆಳಗಾವಿ | ಮೂಲಸೌಲಭ್ಯದಿಂದ ವಂಚಿತ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

ಇ.ಎಸ್.ಸುಧೀಂದ್ರ ಪ್ರಸಾದ್
Published 1 ಏಪ್ರಿಲ್ 2024, 13:50 IST
Last Updated 1 ಏಪ್ರಿಲ್ 2024, 13:50 IST
<div class="paragraphs"><p>ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮಳಗಲಿಗೆ ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್‌ ತೆರಳಿ, ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು</p></div>

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮಳಗಲಿಗೆ ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್‌ ತೆರಳಿ, ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು

   

ಪ್ರಜಾವಾಣಿ ಚಿತ್ರ

ಸವದತ್ತಿ (ಬೆಳಗಾವಿ ಜಿಲ್ಲೆ): ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಯರಗಟ್ಟಿ ತಾಲ್ಲೂಕಿನ ಹಿರೇಬೂದನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಗಲಿ ಗ್ರಾಮಸ್ಥರು, ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹಿರೇಬೂದನೂರ ಗ್ರಾಮ ಪಂಚಾಯ್ತಿ ಕಚೇರಿಗೆ ಸೋಮವಾರ ತೆರಳಿದ ಗ್ರಾಮಸ್ಥರು, ‘ಚುನಾಯಿತ ಪ್ರತಿನಿಧಿಗಳು ನಮಗೆ ಮೂಲಸೌಕರ್ಯ ಒದಗಿಸುವ ಗೋಜಿಗೆ ಹೋಗಿಲ್ಲ. ಇಲ್ಲಿ ಪ್ರತಿಯೊಂದಕ್ಕೂ ಪರದಾಡುವ ಸ್ಥಿತಿ ಇದ್ದು, ಮೂಲಸೌಕರ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ’ ಎಂದು ಪಿಡಿಒ ಗುರುಪಾದ ಗಿರೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.

‘ಊರಲ್ಲಿ ಸರಿಯಾದ ರಸ್ತೆಯಿಲ್ಲ. ಸಮರ್ಪಕವಾಗಿ ವಿದ್ಯುತ್ ಸೌಕರ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರಿಗೆ ವ್ಯವಸ್ಥೆ, ಬ್ಯಾಂಕ್‌ ಮತ್ತು ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ಪರದಾಡುವಂತಾಗಿದೆ. ಜಲಮೂಲಗಳೆಲ್ಲ ಬತ್ತಿದ್ದು, ಹನಿ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿಯಿದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

‘ಬೈಲಹೊಂಗಲ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುವ ಮಳಗಲಿ ಗ್ರಾಮ ಯರಗಟ್ಟಿಯಿಂದ 12 ಕಿ.ಮೀ., ಬೈಲಹೊಂಗಲದಿಂದ 21 ಕಿ.ಮೀ. ದೂರದಲ್ಲಿದೆ. ಪತ್ರ ವ್ಯವಹಾರಕ್ಕಾಗಿ 55 ಕಿ.ಮೀ. ದೂರದ ಸವದತ್ತಿಗೆ ಹೋಗಬೇಕಿದೆ. ಸಮೀಪದ ತಡಸಲೂರಿನ ಬ್ಯಾಂಕಿನಲ್ಲಿ ಸರ್ಕಾರಿ ಯೋಜನೆಗಳಡಿ ನಮಗೆ ಸಾಲ ಸೌಲಭ್ಯವೂ ಸಿಗುತ್ತಿಲ್ಲ’ ಎಂದು ಗ್ರಾ.ಪಂ ಉಪಾಧ್ಯಕ್ಷ ಶಿವರಾಜ ರುದ್ರಪ್ಪನವರ ದೂರಿದರು.

ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಸವದತ್ತಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್‌ ಅವರು, ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು.

‘ಸರ್ಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲಿದೆ. ಬಹಿಷ್ಕಾರ ಬೇಡ’ ಎಂದರು. ‘ಸೌಲಭ್ಯ ಕೊಟ್ಟರೆ ಮತ ಹಾಕುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕಾರ ನಿಶ್ಚಿತ’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಬಸವ್ವ ನಾಯ್ಕಪ್ಪಗೋಳ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.