ADVERTISEMENT

ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಗಿಪಟ್ಟು : ‘ಕೈ’ ಹೈಕಮಾಂಡ್‌ಗೆ ತಲೆನೋವಾದ ‘ನಾಯಕ’ನ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2023, 7:14 IST
Last Updated 15 ಮೇ 2023, 7:14 IST
ಡಿ.ಕೆ. ಶಿವಕುಮಾರ್‌– ಸಿದ್ದರಾಮಯ್ಯ
ಡಿ.ಕೆ. ಶಿವಕುಮಾರ್‌– ಸಿದ್ದರಾಮಯ್ಯ   ಪ್ರಜಾವಾಣಿ ಚಿತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಟ್ಟು ಸಡಿಲಿಸಲು ಮುಂದಾಗದ ಕಾರಣ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಾಯಕನ ಆಯ್ಕೆ ಕುರಿತಂತೆ ಚರ್ಚಿಸಲು ವರಿಷ್ಠರ ಆಹ್ವಾನದ ಮೇರೆಗೆ ವಿಶೇಷ ವಿಮಾನದಲ್ಲಿ ಮಧ್ಯಾಹ್ನವೇ ದೆಹಲಿಗೆ ಹೋಗಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ.

ಆದರೆ, ದೆಹಲಿಗೆ ಹೋಗುವ ಬಗ್ಗೆ ಡಿ.ಕೆ. ಶಿವಕುಮಾರ್‌ ಇನ್ನೂ ನಿರ್ಧರಿಸಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ADVERTISEMENT

ಸಿಎಲ್‌ಪಿ ನಾಯಕ ಸ್ಥಾನಕ್ಕೆ ಪಟ್ಟು ಮುಂದುವರೆಸಿರುವ ಶಿವಕುಮಾರ್, ಶಾಂಗ್ರಿಲಾ ಹೋಟೆಲ್‌ನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಶಿವಕುಮಾರ್‌ ಜೊತೆ ಅವರ ಸಹೋದರ, ಸಂಸದ ಡಿ.. ಸುರೇಶ್ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಇದ್ದಾರೆ.

ಸಿದ್ದರಾಮಯ್ಯನವರೇ ಸಿ.ಎಂ ಆಗಬೇಕು: ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರಾದ ಕೆ.ಎನ್‌. ರಾಜಣ್ಣ, ವೆಂಕಟರಮಣಪ್ಪ, ಟಿ‌.ಬಿ. ಜಯಚಂದ್ರ, ನಂಜೇಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಎನ್. ರಾಜಣ್ಣ, ‘ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಇನ್ಯಾರಿಗೆ ಕೊಡುತ್ತಾರೆ? ನಾನು ಸಿದ್ದರಾಯ್ಯ ಪರ ಕೇಂದ್ರದ ವೀಕ್ಷಕರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ’ ಎಂದರು.

‘ಒಕ್ಕಲಿಗ ಸ್ವಾಮೀಜಿಗಳು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಸಾಮಾನ್ಯ ವ್ಯಕ್ತಿ ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದಾರೆ. ಬೇರೆ ಶಾಸಕರ ಅಭಿಪ್ರಾಯ ನನಗೆ ಗೊತ್ತಿಲ್ಲ. ನನಗೆ ಸಿದ್ದರಾಮಯ್ಯನವರೇ ಸಿ.ಎಂ ಆಗಬೇಕು‘ ಎಂದರು.

ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಹೈಕಮಾಂಡ್ ಘೋಷಿಸಬೇಕು ಎಂದು ಆಗ್ರಹಿಸಿ ಭಿತ್ತಿಪತ್ರಗಳನ್ನು ಹಿಡಿದು ಅವರ ಮನೆ ಮುಂದೆ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ.

ಈ ವೇಳೆ ಮಾತನಾಡಿದ ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಅಧ್ಯಕ್ಷ ವಿಶ್ವನಾಥ್, ‘ಸಿದ್ದರಾಮಯ್ಯ ಸಿ.ಎಂ ಆಗಲೇಬೇಕು. ಅವರು ಒಂದು ಸಮುದಾಯದ ನಾಯಕ ಅಲ್ಲ. ಅವರು ಎಲ್ಲ ವರ್ಗದ ನಾಯಕ. ತಾಯಿ ಚಾಮುಂಡಿಯ ಆಶೀರ್ವಾದ ಅವರ ಮೇಲಿದೆ. ಆ ತಾಯಿಯ ಆಶೀರ್ವಾದದಿಂದ ಅವರು ಸಿ.ಎಂ ಆಗಿಯೇ ಆಗುತ್ತಾರೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.