ಚಿಕ್ಕಮಗಳೂರು: ಜೆಡಿಎಸ್ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ್ದ ವೈ.ಎಸ್.ವಿ ದತ್ತ ಅವರಿಗೆ ಕಡೂರು ಕ್ಷೇತ್ರದ ಟಿಕೆಟ್ ಕೈತಪ್ಪಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗಿನ ಒಳಮುನಿಸು ಮುಳುವಾಯಿತೇ ಎಂಬ ಪ್ರಶ್ನೆ ಎದ್ದಿದೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವೈ.ಎಸ್.ವಿ.ದತ್ತ ಅವರು ಟಿಕೆಟ್ ನಿರೀಕ್ಷೆಯಲ್ಲೇ ಕಾಂಗ್ರೆಸ್ ಸೇರಿದ್ದರು. ಬೇಷರತ್ತಾಗಿ ಪಕ್ಷ ಸೇರಿರುವುದಾಗಿ ಹೇಳಿದ್ದ ಟಿಕೆಟ್ ಗಿಟ್ಟಿಸಲು ಒಳಗೊಳಗೆ ತೀವ್ರ ಕಸರತ್ತು ನಡೆಸಿದ್ದರು. ಇದೇ ಕೊನೆ ಚುನಾವಣೆ, ಮತ್ತೆ ಸ್ಪರ್ಧಿಸಲ್ಲ ಎಂಬ ಅಸ್ತ್ರವನ್ನೂ ಪ್ರಯೋಗಿಸಿದ್ದರು.
‘ವೈ.ಎಸ್.ವಿ ದತ್ತ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಬಾಂಧವ್ಯ ಅಷ್ಟಕಷ್ಟೆ. ಅದರ ಜೊತೆಗೆ ಜಾತಿ ಸಮೀಕರಣ, ವಿವಿಧ ಬಲಗಳ ಲೆಕ್ಕಾಚಾರ ಅವರಿಗೆ ಟಿಕೆಟ್ ಕೈತಪ್ಪಲು ಕಾರಣ’ ಎಂದು ಮುಖಂಡರೊಬ್ಬರು ತಿಳಿಸಿದರು.
ದತ್ತ ಜೆಡಿಎಸ್‌ನಲ್ಲಿದ್ದಾಗ ಕಡೂರು ಕ್ಷೇತ್ರ ದತ್ತ ಅವರಿಗೆ ‘ಮೀಸಲು’ ಎಂಬತೆ ಇತ್ತು. ಆ ಪಕ್ಷವನ್ನೇ ಅವರು ತೊರೆದಿದ್ದರು. ಕ್ಷೇತ್ರದ ಜೆಡಿಎಸ್ ಟಿಕೆಟ್ ಈಗಾಗಲೇ ಘೋಷಣೆಯಾಗಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ದತ್ತ ಅವರಿಗೆ ಈಗ ತ್ರಿಶಂಕು ಸ್ಥಿತಿ ಎದುರಾಗಿದೆ.
ಕಾಂಗ್ರೆಸ್ ಟಿಕೆಟ್‌ಗೆ ಏಳು ಮಂದಿ ಅರ್ಜಿ ಸಲ್ಲಿಸಿದ್ದರು. ದತ್ತ ಅವರೂ ಆಕಾಂಕ್ಷಿಯಾಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಆನಂದ್ ಅವರು ಸೋಲುಂಡಿದ್ದರು. ಈಗ ಎರಡನೇ ಬಾರಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕ್ಷೇತ್ರದ ಬಹುಸಂಖ್ಯಾತ ಸಮುದಾಯಗಳಲ್ಲಿ ಒಂದಾಗಿರುವ ಕುರುಬರಿಗೆ ಪಕ್ಷ ಮತ್ತೊಮ್ಮೆ ಮಣೆ ಹಾಕಿದೆ.
‘ಕೆ.ಎಸ್.ಆನಂದ್ ಅವರು ಕಳೆದ ಬಾರಿ ಸೋತ ನಂತರ ಪಕ್ಷದಿಂದ ದೂರ ಉಳಿದಿರಲಿಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕ್ಷೇತ್ರದ ಜನಾಭಿಪ್ರಾಯ, ಸಮೀಕ್ಷೆ ಆಧರಿಸಿ ವರಿಷ್ಠರು ಟಿಕೆಟ್ ಅಖೈರುಗೊಳಿಸಿದ್ದಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.
ಟಿಕೆಟ್ ತಪ್ಪಿದ್ದು ಏಕೆ ಗೊತ್ತಿಲ್ಲ: ದತ್ತ
‘ಟಿಕೆಟ್ ಕೈತಪ್ಪಿದ್ದು ಯಾಕೆ ಎಂದು ಗೊತ್ತಿಲ್ಲ. ಕಾರ್ಯಕರ್ತರ ಅಭಿಪ್ರಾಯದಂತೆ ಕಾಂಗ್ರೆಸ್ ಸೇರಿದ್ದೆ, ನನಗೆ ಟಿಕೆಟ್ ಸಿಗದಿರುವುದು ಅವರಿಗೆ ನಿರಾಸೆ ಮೂಡಿಸಿದೆ. ಯಗಟಿಯಲ್ಲಿ ನಮ್ಮ ಕಾರ್ಯಕರ್ತರ ಸಭೆ ನಡೆಸುತ್ತೇನೆ. ಅವರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆ ನಿರ್ಧರಿಸುತ್ತೇನೆ’ ಎಂದು ದತ್ತ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.