ADVERTISEMENT

ಪ್ರಧಾನಿ ಮೋದಿ ಏನು ದೇವರಾ, ಛೂ ಮಂತರ್ ಬಾಬಾನಾ?: ನಡ್ಡಾಗೆ ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2023, 11:16 IST
Last Updated 20 ಏಪ್ರಿಲ್ 2023, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಚಿತ್ರನಟ ಕಿಚ್ಚ ಸುದೀಪ್‌ ಅವರು ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದರು.

ಇದೇ ವೇಳೆ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಜೆ.ಪಿ.ನಡ್ಡಾ, ‘ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು. ಮತ ಹಾಕದಿದ್ದರೆ ಮೋದಿಯ ಆರ್ಶೀವಾದದಿಂದ ತಪ್ಪಿಸಿಕೊಳ್ಳುವಿರಿ’ ಎಂದು ಹೇಳಿಕೆ ನೀಡಿದ್ದರು.

ADVERTISEMENT

ನಡ್ಡಾ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದ ಮತದಾರರಿಗೆ ಬೆದರಿಕೆ ಹಾಕಿದ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂ ಮಂತರ್ ಬಾಬಾನಾ’ ಎಂದು ಪ್ರಶ್ನಿಸಿದೆ.

ಬಿಜೆಪಿಗರೇ, ಕನ್ನಡಿಗರ ತೆರಿಗೆ ಭಿಕ್ಷೆಯಲ್ಲಿ ಗತ್ತು, ಗಮ್ಮತ್ತು, ಶೋಕಿ ಮಾಡುತ್ತಿರುವ ಮೋದಿಯೇ ಕನ್ನಡಿಗರಿಗೆ ಋಣಿಯಾಗಿರಬೇಕು ಅಲ್ಲವೇ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿ, ಕನ್ನಡಿಗರನ್ನು ಅವಮಾನಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ‘ಮತ ಹಾಕದಿದ್ದರೆ ಮೋದಿಯ ಆಶೀರ್ವಾದವಿಲ್ಲ’ ಎಂದು ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿ, ಕನ್ನಡಿಗರನ್ನು ಗುಲಾಮರಂತೆ ಕಾಣುವ ಬಿಜೆಪಿಯನ್ನು ರಾಜ್ಯದಿಂದ ಒದ್ದೋಡಿಸಬೇಕು ಎಂದು ಕಾಂಗ್ರೆಸ್ ಕಿಡಿಕಾಡಿದೆ.

ಮತದಾರರಿಗೆ ನಡ್ಡಾ ಬೆದರಿಕೆ: ಆರೋಪ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕನ್ನಡಿಗ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ರಾಜಾರೋಷ ದಾಳಿ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಜೈರಾಮ್‌ ರಮೇಶ್‌, ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಜೆ.ಪಿ. ನಡ್ಡಾ ಅವರು ಮಾಡಿರುವ ಭಾಷಣದ ವಿಡಿಯೊ ತುಣುಕೊಂದನ್ನು ಟ್ವೀಟ್ ಮಾಡಿದ್ದಾರೆ.

‘ಕರ್ನಾಟಕದಲ್ಲಿ ಅಭಿವೃದ್ಧಿಯ ನದಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಕಮಲದ ಚಿಹ್ನೆಗೆ ಮತ ನೀಡಿ. ರಾಜ್ಯದಲ್ಲಿ ಅಭಿವೃದ್ಧಿಯು ನಿರಂತರ ಮುಂದುವರಿಯುತ್ತದೆ ಎಂಬುದು ಚುನಾವಣೆಗಳಲ್ಲಿ ಒಂದು ವಿಷಯವಾಗಿದೆ. ಆದ್ದರಿಂದ ರಾಜ್ಯವು ಮೋದಿ ಜಿ ಅವರ ಆಶೀರ್ವಾದದಿಂದ ದೂರವಿರದು. ಕಮಲದ ಚಿಹ್ನೆಗೆ ಮತ ಚಲಾಯಿಸುವಂತೆ ಮತ್ತು ಅಭಿವೃದ್ಧಿಯನ್ನು ಮುಂದೊಯ್ಯುವಂತೆ ನಾನು ನಿಮ್ಮಲ್ಲಿ ಮನವಿ ಮಾಡುವೆ’ ಎಂದು ನಡ್ಡಾ ಭಾಷಣದಲ್ಲಿ ಹೇಳಿರುವುದು ಈ ವಿಡಿಯೊ ತುಣುಕಿನಲ್ಲಿದೆ.

‘ಭಕ್ತಿಗೆ ಮಿತಿ ಇರಬೇಕು ನಡ್ಡಾ ಜೀ, ಕರ್ನಾಟಕದ ಜನರಿಗೆ ನೀವು ಯಾಕೆ ಬೆದರಿಕೆವೊಡ್ಡುತ್ತೀರಿ ಮತ್ತು ಹೆದರಿಸುತ್ತಿದ್ದೀರಿ? ನಡ್ಡಾ ಅವರು ಶೇ 40 ಕಮಿಷನ್ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮತ ಚಲಾಯಿಸದಿದ್ದರೆ ಕರ್ನಾಟಕದ ಜನರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ. ನಾವು ರಾಜನ ಪ್ರಜೆಗಳಲ್ಲ. ಆದರೆ, ಸಂವಿಧಾನದಿಂದ ನಡೆಯುವ ಒಕ್ಕೂಟ ವ್ಯವಸ್ಥೆಯ ದೇಶದ ನಾಗರಿಕರು. ಕನ್ನಡಿಗರ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ’ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.