ಬೆಂಗಳೂರು: ಬಿಜೆಪಿ ಸ್ಟಾರ್ ಪ್ರಚಾರಕ ಆಗಿರುವ ನಟ ಸುದೀಪ್ ಅವರು ಇಂದು (ಬುಧವಾರ) ಮುಖಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಆರಂಭಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಶಿಗ್ಗಾವಿಗೆ ಆಗಮಿಸಲಿರುವ ಸುದೀಪ್, ಸಿಎಂ ಬೊಮ್ಮಾಯಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಇತರೆ ಗಣ್ಯರು ಬಸವರಾಜ ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದಾರೆ.
ಪ್ರಚಾರ ಕುರಿತು ಟ್ವೀಟ್ ಮಾಡಿರುವ ಸುದೀಪ್, ‘ಕನಕದಾಸರು ಮತ್ತು ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೇ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ’ ಎಂದು ಬರೆದುಕೊಂಡಿದ್ದಾರೆ.
‘ನನ್ನ ಮನವಿಗೆ ಓಗೊಟ್ಟು, ನನ್ನ ಪರ ಪ್ರಚಾರ ಮಾಡಲು ಬಿಡುವು ಮಾಡಿಕೊಂಡು ಆಗಮಿಸಿ, ನನ್ನ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಉಪಸ್ಥಿತನಿದ್ದ, ಆತ್ಮೀಯ ಕಿಚ್ಚ ಸುದೀಪನಿಗೆ ನನ್ನ ಮನದಾಳದಿಂದ ಧನ್ಯವಾದಗಳು’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸ್ಟಾರ್ ಪ್ರಚಾರಕ ಆಗಿರುವ ನಟ ಸುದೀಪ್ ಇರುವ ಜಾಹೀರಾತುಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ತೆರವುಗೊಳಿಸಲಾಗಿದೆ.
ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರುತ್ತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಜೆಡಿಎಸ್ ಮುಖಂಡರು ಸಹ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.