ADVERTISEMENT

ಕರಾವಳಿ ಫಲಿತಾಂಶ ವಿಶ್ಲೇಷಣೆ: ಕರಾವಳಿಯಲ್ಲಿ ಬಿಜೆಪಿಗೆ ಹಿಂದುತ್ವದ ಬಲ

ಗಣೇಶ ಚಂದನಶಿವ
Published 13 ಮೇ 2023, 19:34 IST
Last Updated 13 ಮೇ 2023, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಹಿಂದುತ್ವದ ‘ಬಲೆ’, ಕಾರ್ಯಕರ್ತರ ಬಲದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಂಡಿದೆ. ಸಮುದಾಯದಲ್ಲಿ ಹಿಂದುತ್ವ ಬಿತ್ತಿ, ಭರ್ಜರಿ ಫಸಲು ಪಡೆಯುವಲ್ಲಿ ಈ ಬಾರಿಯೂ ಯಶಸ್ವಿ ಆಗಿದೆ.

13 ಕ್ಷೇತ್ರಗಳಲ್ಲಿ 12 ಬಿಜೆಪಿ ವಶದಲ್ಲಿತ್ತು. ಆ ಪೈಕಿ ಆರು ಶಾಸಕರನ್ನು ಕೈಬಿಟ್ಟು ‘ಹೊಸಮುಖಗಳ ಪ್ರಯೋಗ’ ಮಾಡಿದ್ದು, ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ನೆರವಾಯಿತು.

‘ಹಿಂದುತ್ವದ ಪ್ರಯೋಗಶಾಲೆ’ ಎಂದೇ ಕರೆಯುವ ಇಲ್ಲಿ, ಚುನಾವಣೆಗೆ ಸಾಕಷ್ಟು ಸಮಯ ಇರುವಾಗಲೇ ಬಿಜೆಪಿ ಹಾಗೂ ಸಂಘ ಪರಿವಾರ ಜಂಟಿಯಾಗಿ ಹಿಂದುತ್ವದ ಅಖಾಡ ಸಿದ್ಧಗೊಳಿಸುವ ಕೆಲಸ ಮಾಡಿದವು. ಅದರ ಭಾಗವಾಗಿಯೇ ಹಿಜಾಬ್‌, ಆಝಾನ್‌, ಹಲಾಲ್‌ ಕಟ್ ಮಾಂಸ ಬಹಿಷ್ಕಾರ, ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಂತಹ ವಿವಾದಗಳು ಮುನ್ನೆಲೆಗೆ ಬಂದವು.

ADVERTISEMENT

ಸರಣಿ ಕೊಲೆ: ಬೆಳ್ಳಾರೆ ಕಳಂಜದ ಮಸೂದ್‌, ಪ್ರವೀಣ್ ನೆಟ್ಟಾರು, ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್‌ ಫಾಝಿಲ್ ಹೀಗೆ ಮೂವರು ಯುವಕರ ಸರಣಿ ಕೊಲೆ ನಡೆದವು. ಪ್ರವೀಣ್‌ ಹತ್ಯೆ ಸಂದರ್ಭದಲ್ಲಿ ಹಿಂದುತ್ವವಾದಿ ಕಾರ್ಯಕರ್ತರು ರೊಚ್ಚಿಗೆದ್ದು ನಳಿನ್‌ಕುಮಾರ್ ಕಟೀಲ್‌ ಅವರ ಕಾರನ್ನೇ ಅಲ್ಲಾಡಿಸಿ ಬಿಸಿ ಮುಟ್ಟಿಸಿದ್ದರು. ಈ ಸಂದರ್ಭದಲ್ಲಿ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಲವೇ ಕಿ.ಮೀ ಅಂತರದಲ್ಲಿದ್ದ ಮಸೂದ್‌ ಮನೆಗೆ ಹೋಗಲಿಲ್ಲ. ಪರಿಹಾರ ನೀಡಿಕೆಯಲ್ಲಿಯೂ ‘ತಾರತಮ್ಯ’ ಮಾಡಿ ‘ತಾವು ಹಿಂದುಗಳ ಪರ, ತಮ್ಮದು ಹಿಂದುತ್ವದ ಸರ್ಕಾರ’ ಎಂಬಂತೆ ವರ್ತಿಸಿ ಹಿಂದುತ್ವವಾದಿಗಳ ಮನಗೆಲ್ಲಲು ಯತ್ನಿಸಿದರು. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಅನ್ನು ನಿಷೇಧಿಸಲಾಯಿತು. ಈ ಎಲ್ಲ ಅಂಶಗಳು ಹಿಂದುತ್ವದ ಅಲೆ ಸೃಷ್ಟಿಗೆ ಪೂರಕವಾದವು.

ಕಾರಣ ಏನೇ ಇದ್ದರೂ, ಹಿಜಾಬ್‌ ಹೋರಾಟದ ಪರವಾಗಿ ನಿಲ್ಲಲಿಲ್ಲ ಎಂಬ ಕಾರಣಕ್ಕೆ ಸಚಿವ ಎಸ್‌.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತಿತರರಿಗೆ ಟಿಕೆಟ್‌ ನಿರಾಕರಿಸಲಾಯಿತು ಎಂದು ಬಿಂಬಿಸಲಾಯಿತು. ಉಡುಪಿಯ ಶಾಸಕ ರಘುಪತಿ ಭಟ್‌ ಅವರನ್ನು ಕೈಬಿಟ್ಟು, ಹಿಜಾಬ್‌ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯಶ್‌ಪಾಲ್‌ ಸುವರ್ಣ ಅವರಿಗೆ ಉಡುಗೊರೆ ಎಂಬಂತೆ ಆ ಕ್ಷೇತ್ರದ ಟಿಕೆಟ್‌ ನೀಡಲಾಯಿತು.

ಚುನಾವಣೆ ವೇಳೆ ಈ ಯಾವ ವಿಷಯಗಳೂ ಚರ್ಚೆ ಆಗಲಿಲ್ಲ. ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ, ಆಡಳಿತ ವಿರೋಧಿ ಅಲೆ ಗೌಣವಾಗಿಸುವಲ್ಲಿ ಈ ಭಾವನಾತ್ಮಕ ವಿಷಯಗಳು ಬಿಜೆಪಿಯ ನೆರವಿಗೆ ಬಂದವು. ಮತ ಚದುರದಂತೆ ಕಾರ್ಯಕರ್ತರೂ ನೋಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಚಾರ ನಡೆಸಿದ ಬಿಜೆಪಿ ಪ್ರಮುಖರು ‘ಜೈ ಬಜರಂಗ ಬಲಿ’ ಎಂದು ಘೋಷಣೆ ಕೂಗಿ ಭಾವನೆಗಳನ್ನು ‘ಜಾಗೃತ‘ಗೊಳಿಸುವ ಕೆಲಸ ಮಾಡಿದರು. ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳನ್ನು ಈ ಬಾರಿಯೂ ಬಾಚಿಕೊಂಡಿತು. ದಕ್ಷಿಣ ಕನ್ನಡದ ಏಳರಪೈಕಿ (ಒಟ್ಟು 8 ಕ್ಷೇತ್ರ) ಆರು ಸ್ಥಾನ ಉಳಿಸಿಕೊಂಡಿತು. ಪುತ್ತೂರಲ್ಲಿ ಬಂಡಾಯಕ್ಕೆ ಬಿಜೆಪಿ ಬೆಲೆ ತೆತ್ತಿತು.

ನಾರಾಯಣಗುರು ಪಾಠವೂ ಸೇರಿದಂತೆ ಪಠ್ಯಪುಸ್ತಕ ಪುನರ್‌ ರಚನೆಯಲ್ಲಿ ಆಗಿದ್ದ 'ಪ್ರಮಾದ’ದಿಂದ ಬಿಲ್ಲವ ಸೇರಿದಂತೆ ಹಲವು ಸಮುದಾಯಗಳು ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದವು. ಆದರೆ, ಅದನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಸಫಲವಾಗಲಿಲ್ಲ. 13ರಲ್ಲಿ 8 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿತು. ಮುಸ್ಲಿಂ ಮತದಾರರು ಗಟ್ಟಿಯಾಗಿ ಬೆನ್ನಿಗೆ ಇದ್ದರೂ ಸಹ, ಕೆಲ ಕ್ಷೇತ್ರಗಳಲ್ಲಿ ತಳಮಟ್ಟದ ಕಾರ್ಯಕರ್ತರ ಕೊರತೆ ಆ ಪಕ್ಷಕ್ಕೆ ಮುಳುವಾಯಿತು. ಎಸ್‌ಡಿಪಿಐಯಿಂದಾಗಿಯೇ ಕಾಂಗ್ರೆಸ್‌ ಎಲ್ಲೂ ಸೋತಿಲ್ಲ. ಕಳೆದ ಬಾರಿ ಯು.ಟಿ. ಖಾದರ್‌ ಮಾತ್ರ ಗೆದ್ದಿದ್ದರು. ಈಗ ಅವರೊಟ್ಟಿಗೆ ಪುತ್ತೂರಿನಲ್ಲಿ ಅಶೋಕಕುಮಾರ್‌ ರೈ ಗೆದ್ದಿದ್ದು, ಅಷ್ಟರ ಮಟ್ಟಿಗೆ ಕಾಂಗ್ರೆಸ್‌ ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.