ನವದೆಹಲಿ: ತೀವ್ರ ಹಗ್ಗಜಗ್ಗಾಟದ ಬಳಿಕ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರನೇ ಪಟ್ಟಿಯನ್ನು (43 ಕ್ಷೇತ್ರಗಳು) ಶನಿವಾರ ಪ್ರಕಟಿಸಿದೆ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕತೆ ತೋರಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ದಕ್ಕಿಲ್ಲ.
ವಿಧಾನಸಭೆ ಚುನಾವಣೆ ತಯಾರಿ ಆರಂಭಗೊಳ್ಳುತ್ತಿದ್ದಂತೆ ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯ ಆಸಕ್ತಿ ತೋರಿದ್ದಲ್ಲದೇ, ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ಧತೆಯನ್ನೂ ನಡೆಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಬಳಿಕ ಹಿಂದೆ ಸರಿದಿದ್ದ ಅವರು, ಪಕ್ಷ ಸೂಚಿಸಿದ ವರುಣ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧರಿಸಿದ್ದರು.
ಕೋಲಾರದಲ್ಲಿ ಸ್ಪರ್ಧಿಸಿದರೆ ಸುತ್ತಲಿನ ಏಳೆಂಟು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಟಿಕೆಟ್ ಆಕಾಂಕ್ಷಿಗಳು ಹೇಳುತ್ತಿದ್ದಾರೆ. ಹೀಗಾಗಿ, ವರುಣ ಜತೆಗೆ ಕೋಲಾರವನ್ನೂ ನೀಡಿದರೆ, ಸ್ಪರ್ಧೆ ಮಾಡುವೆ ಎಂದು ವರಿಷ್ಠರಿಗೆ ತಿಳಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದರೆ, ಸಿದ್ದರಾಮಯ್ಯ ರಾಜ್ಯ ಸುತ್ತಾಡಿ ಪ್ರಚಾರ ಮಾಡುವುದು ಕಷ್ಟವೆಂಬ ಕಾರಣಕ್ಕೆ ಅವರನ್ನು ಒಂದೇ ಕ್ಷೇತ್ರಕ್ಕೆ ಸೀಮಿತಗೊಳಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕೋಲಾರದ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬ ಕಾರಣಕ್ಕೆ ಮೂರನೇ ಪಟ್ಟಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಕ್ಷೇತ್ರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರನ್ನು ಪಕ್ಷ ಅಭ್ಯರ್ಥಿ ಎಂದು ಘೋಷಿಸಿದೆ.
ಕೋಲಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರ‍್ಯಾಲಿ ಭಾನುವಾರ ನಡೆಯಲಿದ್ದು, ಅದಕ್ಕೆ ಒಂದು ದಿನ ಮುಂಚಿತವಾಗಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಖೈರುಗೊಳಿಸಿದೆ. ಪಕ್ಷವು ಈವರೆಗೆ 209 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
‘ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಜತೆಗೆ, ಮತ್ತೊಬ್ಬ ಆಕಾಂಕ್ಷಿಯನ್ನು ಅವಕಾಶ ವಂಚಿತರನ್ನಾಗಿ ಮಾಡಿದಂತೆ ಆಗುತ್ತದೆ’ ಎಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ (ಸಿಇಸಿ) ಚರ್ಚೆಗಳು ನಡೆ
ದಿದ್ದವು. ಸಿದ್ದರಾಮಯ್ಯ ಸ್ಪರ್ಧೆಯ ಕುರಿತು ರಾಹುಲ್ ಗಾಂಧಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು
ಪಕ್ಷದ ರಾಜ್ಯ ನಾಯಕರು ಹೇಳಿದ್ದರು. ಇದೀಗ, ಸಿದ್ದರಾಮಯ್ಯ ಸ್ಪರ್ಧೆಗೆ ರಾಹುಲ್ ಒಪ್ಪಿಗೆ ನೀಡಿಲ್ಲ. ಅದರ ಬೆನ್ನಲ್ಲೇ, ಕಾಂಗ್ರೆಸ್ ಕಾರ್ಯಕರ್ತರು ಕೋಲಾರದಲ್ಲಿ ದಾಂದಲೆ ನಡೆಸಿ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆ, ಶ್ರೀನಿವಾಸಪುರದ ಶಾಸಕ ಕೆ.ಆರ್. ರಮೇಶ ಕುಮಾರ್ ಮುನಿಸಿಕೊಂಡಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ವಿ.ಆರ್. ಸುದರ್ಶನ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಾಗಿ ಪ್ರಕಟಿಸಿದ್ದಾರೆ.
ವಲಸಿಗರಿಗೆ ಮಣೆ: ಶುಕ್ರವಾರವಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಲಕ್ಷ್ಣಣ ಸವದಿ, ಕೆಲವು ದಿನಗಳ ಹಿಂದೆ ‘ಕೈ’ಪಾಳಯಕ್ಕೆ ಬಂದ ಕೆ.ಎಂ. ಶಿವಲಿಂಗೇಗೌಡ, ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ರೇವು ನಾಯಕ ಬೆಳಮಗಿ ಸೇರಿದಂತೆ 12ಕ್ಕೂ ಹೆಚ್ಚು ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ನಾಲ್ವರು ಶಾಸಕರ ಹೆಸರಿಲ್ಲ
‘ಕೈ’ ಪಾಳಯದ ಹಾಲಿ ಶಾಸಕರು ಇರುವ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಮೂರನೇ ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ. ಇದರಿಂದಾಗಿ, ಈ ಶಾಸಕರು ಅತಂತ್ರಗೊಂಡಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಬಿಜೆಪಿ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ ಅವರು ಸಿದ್ದರಾಮಯ್ಯ ಅವರನ್ನು ಎರಡು ದಿನಗಳ ಹಿಂದೆ ಭೇಟಿ ಮಾಡಿ ‘ಕೈ’ ಪಾಳಯಕ್ಕೆ ಸೇರ್ಪಡೆಯಾಗುವ ಹಂಬಲ ವ್ಯಕ್ತಪಡಿಸಿದ್ದರು. ಇದೀಗ, ಅಭ್ಯರ್ಥಿಯನ್ನಾಗಿ ಕುಸುಮಾವತಿ ಹೆಸರನ್ನು ಪಕ್ಷ ಅಖೈರುಗೊಳಿಸಿದೆ.
ಪುಲಕೇಶಿನಗರ (ಅಖಂಡ ಶ್ರೀನಿವಾಸಮೂರ್ತಿ), ಶಿಡ್ಲಘಟ್ಟ (ವಿ.ಮುನಿಯಪ್ಪ), ಹರಿಹರ (ಎಂ.ರಾಮಪ್ಪ), ಲಿಂಗಸುಗೂರು (ಡಿ.ಎಸ್.ಹೂಲಗೇರಿ) ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಅಖಂಡ ಅವರು ಸಿದ್ದರಾಮಯ್ಯ ಅವರನ್ನು ಹಲವು ಸಲ ಭೇಟಿ ಮಾಡಿ ಟಿಕೆಟ್ ಕೊಡಿಸುವಂತೆ ದುಂಬಾಲು ಬಿದ್ದಿದ್ದರು. ಅಖಂಡ ಪರ ಸಿದ್ದರಾಮಯ್ಯ ಲಾಬಿ ನಡೆಸಿದ್ದರು. ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ. ಪ್ರಸನ್ನ ಕುಮಾರ್ ಅವರನ್ನು ಕಣಕ್ಕೆ ಇಳಿಸುವಂತೆ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
‘ಆಪರೇಷನ್’ ಸೂತ್ರಧಾರರಿಗೆ ಕೈ–ದಳ ಟಿಕೆಟ್
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು 2019ರಲ್ಲಿ ನಡೆಸಿದ ‘ಆಪರೇಷನ್ ಕಮಲ’ ಕಾರ್ಯಾಚರಣೆಯ ಸೂತ್ರಧಾರಿಗಳಲ್ಲಿ ಪ್ರಮುಖರಾಗಿದ್ದ ಉದ್ಯಮಿ ಕದಲೂರು ಉದಯ್ ಮತ್ತು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಎನ್.ಆರ್. ಸಂತೋಷ್‌ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಬಾಗಿಲು ತೆರೆದಿವೆ.
ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ವಸತಿ, ಊಟ ಸೇರಿದಂತೆ ಸಕಲವನ್ನೂ ಉದಯ್ ವ್ಯವಸ್ಥೆ ಮಾಡಿದ್ದರು. ಅವರೇ ಸರ್ಕಾರ ಪತನಕ್ಕೆ ಮುಖ್ಯ ಸೂತ್ರಧಾರಿ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಉದಯ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಕಾಂಗ್ರೆಸ್, ಮದ್ದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ.
ಯಡಿಯೂರಪ್ಪ ಅವರ ಸಂಬಂಧಿ ಎನ್.ಆರ್. ಸಂತೋಷ್, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಬೆಂಗಳೂರಿನಿಂದ ಮುಂಬೈಗೆ ವಿಮಾನ ಹತ್ತಿಸಿ ಕಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ವಿರುದ್ಧ ಕುಮಾರಸ್ವಾಮಿ ಕಂಡಾಪಟ್ಟೆ ರೇಗಾಡಿದ್ದರು. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸಂತೋಷ್, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪುತ್ತಿದ್ದಂತೆ ಜೆಡಿಎಸ್ ಕದ ತಟ್ಟಿದ್ದರು. ಕುಮಾರಸ್ವಾಮಿ ಅವರೇ ಸಂತೋಷ್ ಅವರನ್ನು ಶನಿವಾರ ಜೆಡಿಎಸ್‌ಗೆ ಸ್ವಾಗತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.