ADVERTISEMENT

ವಿಧಾನಸಭೆ ಚುನಾವಣೆ: ಮತಗಟ್ಟೆ ಸಿಬ್ಬಂದಿ ಊಟೋಪಚಾರಕ್ಕೆ ಬರೀ ₹ 150 ನಿಗದಿ

ಸೌಲಭ್ಯ ಒದಗಿಸುವುದೇ ಶಾಲಾ ಮುಖ್ಯಸ್ಥರಿಗೆ ಸವಾಲಿನ ಕಾರ್ಯ

ಬಾಲಕೃಷ್ಣ ಪಿ.ಎಚ್‌
Published 8 ಮೇ 2023, 20:55 IST
Last Updated 8 ಮೇ 2023, 20:55 IST
ಪಿ.ಎನ್‌. ಲೋಕೇಶ್‌
ಪಿ.ಎನ್‌. ಲೋಕೇಶ್‌   

ದಾವಣಗೆರೆ: ಚುನಾವಣಾ ಸಿಬ್ಬಂದಿಯ ನಾಲ್ಕು ಹೊತ್ತಿನ ಊಟ, ಉಪಾಹಾರಕ್ಕೆ ಚುನಾವಣಾ ಆಯೋಗವು ಕೇವಲ ₹ 150 ನಿಗದಿ ಮಾಡಿದೆ. ಆ ಮೊತ್ತದಲ್ಲಿ ಆಹಾರ ತಯಾರಿಸಿ ಒದಗಿಸಬೇಕಾದ ಸವಾಲು ಆಯಾ ಮತಗಟ್ಟೆ ಸ್ಥಾಪನೆಯಾಗಿರುವ ಶಾಲೆಗಳ ಮುಖ್ಯಸ್ಥರಿಗೆ ಎದುರಾಗಿದೆ.

‘ಒಂದು ಮತಗಟ್ಟೆ ಸಿಬ್ಬಂದಿಗೆ ಕೇವಲ ₹ 600 ನೀಗದಿಪಡಿಸಲಾಗಿದೆ. ಈ ಮೊತ್ತದ ನೆರವಿನೊಂದಿಗೆ, ಅಕ್ಷರ ದಾಸೋಹದ ಮೂಲಕ ಊಟೋಪಚಾರ ನಿರ್ವಹಿಸಬೇಕು’ ಎಂದು ಚುನಾವಣಾ ಆಯೋಗ ಹೊರಡಿಸಿರುವ ಆದೇಶದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಹೆಚ್ಚುವರಿ ಚುನಾವಣಾಧಿಕಾರಿ ಶಾಲಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಮತದಾನದ ಹಿಂದಿನ ದಿನವೇ ಅವರು ಮತಯಂತ್ರ ಸಹಿತ ಸಂಬಂಧಿಸಿದ ಪರಿಕರಗಳ ಸಮೇತ ಮತಗಟ್ಟೆ ತಲುಪಲಿದ್ದಾರೆ. ಮೇ 9ರ ರಾತ್ರಿಯ ಊಟ, ಚುನಾವಣೆಯ ದಿನವಾದ ಮೇ 10ರಂದು ಬೆಳಿಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಸಂಜೆ ಲಘು ಉಪಾಹಾರವನ್ನು ಈ ಹಣದಲ್ಲಿಯೇ ಭರಿಸಬೇಕು ಎಂಬುದು ಈ ಸೂಚನೆ.

ADVERTISEMENT

ಅಲ್ಲದೇ, ಮತದಾನದ ದಿನ ಭದ್ರತಾ ವ್ಯವಸ್ಥೆಗೆ ನಿಯುಕ್ತರಾಗುವ ಪೊಲೀಸ್‌ ಇಲಾಖೆಯ ಸಿಬ್ಬಂದಿಯ ಊಟ– ಉಪಾಹಾರಕ್ಕೆ ಪ್ರತ್ಯೇಕವಾಗಿ ದರ ನಿಗದಿ ಮಾಡಲಾಗಿದೆ. ಪೊಲೀಸ್‌ ಇಲಾಖೆ ಒಬ್ಬ ಸಿಬ್ಬಂದಿಗೆ ತಲಾ ₹ 250ರಂತೆ ನಿಗದಿಪಡಿಸಿದೆ. ಈ ಹಣದ ನೆರವಿನಿಂದ ಅವರಿಗೂ ಅಕ್ಷರ ದಾಸೋಹ ಯೋಜನೆ ಅಡಿ ಊಟೋಪಚಾರ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗಿದೆ.

₹ 150ಕ್ಕೆ ಗುಣಮಟ್ಟದ ಆಹಾರವನ್ನು ನಾಲ್ಕು ಹೊತ್ತು ನೀಡುವುದು ಕಷ್ಟ. ಸಿಬ್ಬಂದಿ ಬಗ್ಗೆ ಕಾಳಜಿ ಇದ್ದರೆ, ಪೊಲೀಸ್ ಸಿಬ್ಬಂದಿಗೆ ನಿಗದಿಪಡಿಸಿದಂತೆ ಒಬ್ಬರಿಗೆ ಕನಿಷ್ಠ ₹ 250 ನೀಡಬೇಕು. ಆಹಾರದ ವೆಚ್ಚ ನಿಗದಿ ಮಾಡುವಾಗ ಈ ತಾರತಮ್ಯ ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ದಾವಣಗೆರೆ ಜಿಲ್ಲೆಯ ಶಾಲೆಯೊಂದರ ಮುಖ್ಯಸ್ಥರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಶಾಲೆಯ ಮುಖ್ಯಸ್ಥರು ತಮ್ಮ ಕಿಸೆಯಿಂದ ಹಣ ಹಾಕಿ ಒಳ್ಳೆಯ ಆಹಾರ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಆಯಾ ಶಾಲೆಯವರಿಗೆ ಕೆಟ್ಟ ಹೆಸರು ಬರುತ್ತದೆ. ಇದನ್ನು ಪರಿಗಣಿಸಿ ಚುನಾವಣಾ ಆಯೋಗವು ದರ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸರ್ಕಾರಿ ನೌಕರರ ಸಂಘವೂ ಆಕ್ಷೇಪ ವ್ಯಕ್ತಪಡಿಸಿದೆ. ಚುನಾವಣಾ ಆಯೋಗವು ಗಮನಹರಿಸಿ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಜಿಲ್ಲಾದಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಸಂಘ ಮನವಿ ಮಾಡಿದೆ.

ಮತಗಟ್ಟೆಯ ಅಧಿಕಾರಿ ಸಿಬ್ಬಂದಿ ಉಪಾಹಾರಕ್ಕೆ ₹ 600 ನಿಗದಿ ಪಡಿಸಿಸಿರುವ ಸುತ್ತೋಲೆ
ಪ್ರತಿ ಪೊಲೀಸ್‌ ಸಿಬ್ಬಂದಿಯ ಉಪಾಹಾರಕ್ಕೆ ₹ 250 ನಿಗದಿ ಪಡಿಸಿರುವುದು
ಚುನಾವಣಾ ಆಯೋಗ ನಿಗದಿ ಪಡಿಸಿದ್ದಷ್ಟೇ ಜಿಲ್ಲಾಡಳಿತ ನೀಡಲು ಸಾಧ್ಯ. ಆಯೋಗವು ದರವನ್ನು ಪುನರ್‌ ಪರಿಶೀಲಿಸಿ ಹೆಚ್ಚಿಸಿದರೆ ಅದನ್ನು ಪರಿಗಣಿಸಲಾಗುವುದು.
–ಪಿ.ಎನ್‌. ಲೋಕೇಶ್‌ ಹೆಚ್ಚುವರಿ ಜಿಲ್ಲಾಧಿಕಾರಿ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.