ADVERTISEMENT

ಸುಳ್ಯ | ಗುರುತಿನ ಚೀಟಿ ಗೊಂದಲ; ಮತದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಮೇ 2023, 7:57 IST
Last Updated 10 ಮೇ 2023, 7:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಳ್ಯ (ದಕ್ಷಿಣ ಕನ್ನಡ): ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಮತದಾನ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ಬದಲು ಆಧಾರ್ ಕಾರ್ಡ್ ತಂದ ಕೆಲವು ಮತದಾರರಿಗೆ ಚುನಾವಣಾ ಸಿಬ್ಬಂದಿ ಕೆಲಹೊತ್ತಿನ ನಂತರ ಬನ್ನಿ ಎಂದು ಹೇಳಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು.

‘ನಿನ್ನೆ ರಾತ್ರಿ ಸೆಕ್ಟರ್ ಅಧಿಕಾರಿಗಳಿಂದ ಸಂದೇಶ ಬಂದಿದ್ದು, ಮತದಾರರ ಗುರುತಿನ ಚೀಟಿ ಬದಲು ಬೇರೆ ಕಾರ್ಡ್ ತಂದವರನ್ನು 11 ಗಂಟೆ ನಂತರ ಬರುವಂತೆ ಹೇಳಿ ಎಂಬ ಸಂದೇಶ ಬಂದಿದೆ’ ಎಂದು ಮತಗಟ್ಟೆ ಸಿಬ್ಬಂದಿ ಹೇಳಿದರೆನ್ನಲಾಗಿದೆ. ಇದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳೀಯರು ಸೆಕ್ಟರ್ ಅಧಿಕಾರಿಗಳ ಮೊಬೈಲ್ ಫೋನ್ ಸಂಖ್ಯೆ ಪಡೆದು ಕರೆ ಮಾಡಿದಾಗ, ಅವರು ನಿಯಮದ ಪ್ರಕಾರ ಚುನಾವಣಾ ಗುರುತಿನ ಚೀಟಿ ತರಬೇಕು ಎಂದಿದ್ದು, ಬದಲಿ ಕಾರ್ಡ್ ತಂದವರಿಗೂ ಮತದಾನಕ್ಕೆ ಅವಕಾಶ ಇದೆ ಎಂದು ತಿಳಿಸಿದರು. ಬಳಿಕ ಆಧಾರ್ ಕಾರ್ಡ್ ತಂದವರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ADVERTISEMENT

ಜಾಲ್ಸೂರು ಗ್ರಾಮದ ಅಡ್ಕಾರಿನ ಬೂತ್ ಸಂಖ್ಯೆ 184ರ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ಕೆಲಕಾಲ ತಾಂತ್ರಿಕ ದೋಷ ಕಂಡುಬಂದಿತು. ಈ ವೇಳೆ ಅಲ್ಲಿನ ಚುನಾವಣಾ ಸಿಬ್ಬಂದಿ, ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರ ನೆರೆವಿನೊಂದಿಗೆ ಹೊಸ ಮತಯಂತ್ರವನ್ನು ತಂದ ಬಳಿಕ ಮತದಾನ ಪ್ರಕ್ರಿಯೆ ಮತ್ತೆ ಆರಂಭಗೊಂಡಿತು. ಸುಮಾರು ಅರ್ಧ ಗಂಟೆ ಮತದಾರರು ಸಾಲಿನಲ್ಲಿ ಕಾದು ನಿಲ್ಲುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.