ADVERTISEMENT

ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗೆ ಗಾಬರಿ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 4 ಮೇ 2023, 8:57 IST
Last Updated 4 ಮೇ 2023, 8:57 IST
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹನುಮ ದೇವರ ಮೂರ್ತಿಗೆ ನಮಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹನುಮ ದೇವರ ಮೂರ್ತಿಗೆ ನಮಿಸಿದರು.   

ಮೈಸೂರು: 'ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಯವರಿಗೆ ಬಹಳ ಗಾಬರಿಯಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ರಾಜ್ಯಕ್ಕೆ ಬಂದಿರುವ ದುಃಖ ದೂರು ಮಾಡುವಂತೆ ಚಾಮುಂಡಿ ದೇವಿಯನ್ನು ಬೇಡಿದ್ದೇನೆ. ನಮಗೆ ಖಂಡಿತ ಯಶಸ್ಸು

ಸಿಗುತ್ತದೆ. ದುಷ್ಟರನ್ನು ದೂರ ಮಾಡಿ, ಈ ರಾಜ್ಯಕ್ಕೆ ತಾಯಿ ಒಳ್ಳೆಯದು ಮಾಡುತ್ತಾಳೆ' ಎಂದರು.

ADVERTISEMENT

'ಬಜರಂಗ ದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ? ಬಜರಂಗ ದಳ ಒಂದು ರಾಜಕೀಯ ಪಕ್ಷದ ವಿಭಾಗ. ಹುಟ್ಟುವವರೆಲ್ಲಾ ಬಸವಣ್ಣ ಆಗೋಕೆ ಆಗುತ್ತದೆಯೇ? ಹನುಮಂತನ ಹೆಸರು ಇಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ?' ಎಂದು ಕೇಳಿದರು.

'ಬಜರಂಗ ಬಲಿಯ ಭಕ್ತರು ನಾವು. ಆಂಜನೇಯನ ಭಕ್ತರು ನಾವು. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ತಿಳಿಸಲು ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತವೆ. ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ' ಎಂದರು.

'ದೇವರ ಹೆಸರನ್ನು ರಾಜಕೀಯವಾಗಿ ಬಳಸಲು ಪ್ರಧಾನಿ ನರೇಂದ್ರ ‌ಮೋದಿ

ಹಾಗೂ ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಒಂದು ಆಂಜನೇಯನ ದೇವಾಲಯವನ್ನಾದರೂ ಬಿಜೆಪಿಯವರು ಕಟ್ಟಿದ್ದಾರಾ?' ಎಂದು ‌ಕೇಳಿದರು.

'ಪ್ರತಿ ತಾಲ್ಲೂಕಿನಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಸುತ್ತೇವೆ' ಎಂದರು.

ಕಾಂಗ್ರೆಸ್ ‌ಪ್ರಣಾಳಿಕೆ ಪ್ರತಿಯನ್ನು ಶಾಸಕ ಕೆ.ಎಸ್.ಈಶ್ವರಪ್ಪ ‌ಸುಟ್ಟಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 'ಬಿಜೆಪಿಯವರು ಈಶ್ವರಪ್ಪನನ್ನೇ ಮೂಲೆಗುಂಪು ಮಾಡಿ ಸುಟ್ಟು ಹಾಕಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರನ್ನೇ ಸುಟ್ಟು ಹಾಕಿದರು' ಎಂದು ‌ತಿರುಗೇಟು ನೀಡಿದರು.

'ದೇವರನ್ನು ನಾನು ನಂಬಿದ್ದೇನೆ. ವೈಯಕ್ತಿಕವಾಗಿ ನನಗೆ ಫಲ ಸಿಗುತ್ತದೆ ಹಾಗೂ ರಾಜ್ಯಕ್ಕೂ ಫಲ ಸಿಗುತ್ತದೆ' ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.