ADVERTISEMENT

ಶೆಟ್ಟರ್ ಸ್ವಾಗತಿಸುವಾಗ ಕಣ್ಣೀರಿಟ್ಟ ಪತ್ನಿ ಶಿಲ್ಪಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 23:30 IST
Last Updated 17 ಏಪ್ರಿಲ್ 2023, 23:30 IST
ಕಾಂಗ್ರೆಸ್ ಸೇರಿದ ಬಳಿಕ ಸೋಮವಾರ ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ಬಂದ ಜಗದೀಶ ಶೆಟ್ಟರ್ ಅವರನ್ನು ಸ್ವಾಗತಿಸುವಾಗ ಭಾವುಕರಾದ ಪತ್ನಿ ಶಿಲ್ಪಾ ಶೆಟ್ಟರ್ ಅವರು ಪತಿಯ ಎದೆಗೊರಗಿ ಕಣ್ಣೀರಿಟ್ಟರು
ಕಾಂಗ್ರೆಸ್ ಸೇರಿದ ಬಳಿಕ ಸೋಮವಾರ ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ಬಂದ ಜಗದೀಶ ಶೆಟ್ಟರ್ ಅವರನ್ನು ಸ್ವಾಗತಿಸುವಾಗ ಭಾವುಕರಾದ ಪತ್ನಿ ಶಿಲ್ಪಾ ಶೆಟ್ಟರ್ ಅವರು ಪತಿಯ ಎದೆಗೊರಗಿ ಕಣ್ಣೀರಿಟ್ಟರು   

ಹುಬ್ಬಳ್ಳಿ: ಕಾಂಗ್ರೆಸ್ ಸೇರಿದ ಬಳಿಕ ನಗರದಲ್ಲಿರುವ ನಿವಾಸಕ್ಕೆ ಸೋಮವಾರ ಬಂದ ಪತಿ ಜಗದೀಶ ಶೆಟ್ಟರ್ ಅವರನ್ನು ಸ್ವಾಗತಿಸುವ ವೇಳೆ ಪತ್ನಿ ಶಿಲ್ಪಾ ಶೆಟ್ಟರ್‌ ಭಾವುಕರಾದರು, ಅವರ ಎದೆಗೊರಗಿ ಕಣ್ಣೀರಿಟ್ಟರು. ಆಗ ಶೆಟ್ಟರ್‌ ಪತ್ನಿಯನ್ನು ಸಂತೈಸಿದರು.

ಶಿಲ್ಪಾ ಅವರು ಕಣ್ಣೀರಿಟ್ಟಾಗ ಅವರನ್ನು ಸಮಾಧಾನಪಡಿಸಿದ ಶೆಟ್ಟರ್ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ‘ನೀವೇನೂ ತಲೆ ಕೆಡಿಸಿಕೊಳ್ಳಬೇಡಿ. ಶೆಟ್ಟರ್ ಅವರನ್ನು ಏಳನೇ ಬಾರಿಗೆ ವಿಧಾನಸೌಧಕ್ಕೆ ಕಳಿಸುವ ಜವಾಬ್ದಾರಿ ನಮ್ಮದು’ ಎಂದು ಧೈರ್ಯ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ, ‘ಪಕ್ಷ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರೂ, ಶೆಟ್ಟರ್ ಬಿಜೆಪಿ ತೊರೆದಿದ್ದು ಸರಿಯಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಶೆಟ್ಟರ್ ಅವರು ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಬಿಜೆಪಿ ತೊರೆದಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ಪಕ್ಷ ಟಿಕೆಟ್ ನೀಡಲು ವಿಳಂಬ ಧೋರಣೆ ಅನುಸರಿಸಿದಾಗ ಅವರು ಬೇಸರಗೊಂಡರು. ಇದೊಂದು ಬಾರಿ ಸ್ಪರ್ಧಿಸಲು ಅವಕಾಶ ನೀಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ, ವರಿಷ್ಠರು ಸ್ಪಂದಿಸಲಿಲ್ಲ. ಬದಲಾಗಿ, ನನಗೆ ಟಿಕೆಟ್ ಕೊಡುವುದಾಗಿ ಹೇಳಿದರು. ಪತಿಯನ್ನು ಅವಮಾನಿಸಿದವರ ಪಕ್ಷದಿಂದ ನಾನು ಸ್ಪರ್ಧಿಸುವುದು ಎಷ್ಟು ಸರಿ’ ಎಂದು ಕೇಳಿದರು.

‘ವಯಸ್ಸಿನ ಕಾರಣ ಮುಂದು ಮಾಡಿ ಟಿಕೆಟ್ ನಿರಾಕರಿಸಲಾಗಿದೆ. ಹಾಗಿದ್ದರೆ, ಪಕ್ಷದಲ್ಲಿ ಶೆಟ್ಟರ್ ಅವರಿಗಿಂತಲೂ ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲವೆ? ಬಿ.ಎಸ್. ಯಡಿಯೂರಪ್ಪ ಅವರ ನಂತರ, ಶೆಟ್ಟರ್ ಅವರು ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಕೆಲವರು ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.