ADVERTISEMENT

ಶೆಟ್ಟರ್ ಕಡೆಗಣಿಸಿದ್ದರೆ ತಪ್ಪು; ಮೂರು ಸಾವಿರ ಮಠದ ಶ್ರೀ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 22:45 IST
Last Updated 19 ಏಪ್ರಿಲ್ 2023, 22:45 IST
ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮುಖಂಡ ಆರ್‌.ವಿ.ದೇಶಪಾಂಡೆ ಅವರು ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು
ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮುಖಂಡ ಆರ್‌.ವಿ.ದೇಶಪಾಂಡೆ ಅವರು ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು   

ಹುಬ್ಬಳ್ಳಿ: ‘ಎಲ್ಲ ಪಕ್ಷಗಳಲ್ಲಿಯೂ ಲಿಂಗಾಯತರಿಗೆ ಆದ್ಯತೆ ನೀಡಿದ್ದಾರೆ. ಬಿಜೆಪಿಯವರು ಲಿಂಗಾಯತರ ವಿರುದ್ಧ ವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಶೆಟ್ಟರ್ ಅವರನ್ನು ಗುರಿಯಾಗಿಸಿಕೊಂಡು ಅವರನ್ನು ಕಡೆಗಣಿಸಿದ್ದರೆ ತಪ್ಪು’ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮುಖಂಡ
ರಾದ ಆರ್‌.ವಿ.ದೇಶಪಾಂಡೆ, ಪಿ.ವಿ. ಮೋಹನ್, ಪಿ.ಸಿ.ವಿಷ್ಣುನಾದ ಅವರು ಬುಧವಾರ ನಗರದ ಮೂರು ಸಾವಿರ ಮಠಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿದ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

‘ಜಗದೀಶ ಶೆಟ್ಟರ್ ಅವರು ಹಿಂದೆ ಬಿಜೆಪಿಯಲ್ಲಿದ್ದರು. ಹೀಗಾಗಿ ನ್ಯಾಯಯುತವಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದೆ. ಈಗ ಆ ಪಕ್ಷದ ಕಾರ್ಯಸೂಚಿಯಂತೆ ಅವರಿಗೆ ಟಿಕೆಟ್ ನಿರಾಕರಿಸಿರಬಹುದು’ ಎಂದು ಹೇಳಿದರು.

ADVERTISEMENT

‘ಯಾವುದೇ ವ್ಯಕ್ತಿ ಒಂದು ಪಕ್ಷದಲ್ಲಿ ಇದ್ದಾಗ ಆ ಪಕ್ಷದ ಸಿದ್ಧಾಂತಕ್ಕೆ ನಿಷ್ಠರಾಗಿ ಇರಬೇಕು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಯಾವುದೇ ಪಕ್ಷದಲ್ಲಿ‌ ಇಂದು ತತ್ವ ಸಿದ್ಧಾಂತ ಉಳಿದಿಲ್ಲ. ಪಕ್ಷಾಂತರ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ನಾವು ಚಿಂತನೆ ಮಾಡಬೇಕಿದೆ’ ಎಂದರು.

ಎಂ.ಬಿ.ಪಾಟೀಲ ಮಾತನಾಡಿ, ‘ಶೆಟ್ಟರ್ ಅವರಿಗೆ ಬಿಜೆಪಿಯವರು ಮಾಡಿರುವ ಅವಮಾನದ ಬಗ್ಗೆ ಸ್ವಾಮೀಜಿಗೆ ವಿವರಿಸಲಾಗಿದೆ’ ಎಂದರು.

ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಮಾತನಾಡಿ, ಜಗದೀಶ ಶೆಟ್ಟರ್ ಅವರ ಅನುಭವ ಕಾಂಗ್ರಸ್‌ಗೆ ಖಂಡಿತ ಲಾಭವಾಗಲಿದೆ. ಪಕ್ಷದಿಂದಲೂ ಅವರಿಗೆ ಲಾಭ ಆಗುತ್ತದೆ ಎಂದರು. ಇದಕ್ಕೂ ಮುನ್ನ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದ ಜೆ.ಪಿ.ನಡ್ಡಾ ಶೆಟ್ಟರ್ ಅವರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.