ADVERTISEMENT

ಕಾಂಗ್ರೆಸ್ ಪ್ರಣಾಳಿಕೆ; ಶೆಟ್ಟರ್ ಬಹಿರಂಗವಾಗಿ ವಿರೋಧಿಸಲಿ: ಈಶ್ವರಪ್ಪ

ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2023, 16:27 IST
Last Updated 5 ಮೇ 2023, 16:27 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಹುಬ್ಬಳ್ಳಿ: ‘ಬಜರಂಗದಳ ನಿಷೇಧ ವಿಷಯವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿರುವ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸುವೆ ಎಂದು ಜಗದೀಶ ಶೆಟ್ಟರ್‌ ಹೇಳಿದ್ದಾರೆ. ನಾಲ್ಕು ಗೋಡೆಗಳ ನಡುವೆ ಮಾತಾಡುವ ಬದಲು ಬಹಿರಂಗವಾಗಿ ವಿರೋಧಿಸಬೇಕು’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೆಟ್ಟರ್ ಬಿಜೆಪಿಯ ಸಿದ್ಧಾಂತದಿಂದ ಇನ್ನೂ ಹೊರ ಬಂದಿಲ್ಲ. ಒಬ್ಬ ವ್ಯಕ್ತಿಯ ಕಾರಣಕ್ಕೆ ಬಿಜೆಪಿ ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ. ಅವರ ಕಚೇರಿಯಲ್ಲಿ ಈಗಲೂ ಮೋದಿ, ಅಮಿತ್‌ ಶಾ ಅವರ ಚಿತ್ರಗಳಿವೆ. ಬಿಜೆಪಿಯ ರಾಷ್ಟ್ರೀಯವಾದದ ಬಗ್ಗೆ ಇನ್ನೂ ಅವರಿಗೆ ಆಸಕ್ತಿ ಇದೆ. ಇಲ್ಲವೆಂದಿದ್ದರೆ ಕಾಂಗ್ರೆಸ್‌ನ ಪ್ರಣಾಳಿಕೆ ಸರಿ ಇದೆ ಎಂದು ಹೇಳುತ್ತಿದ್ದರು’ ಎಂದರು.

‘ಸ್ವಾಭಿಮಾನ ಇದ್ದಿದ್ದರೆ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಹೋಗುತ್ತಿರಲಿಲ್ಲ. ಒಂದು ಟಿಕೆಟ್‌ಗಾಗಿ ಅವರು ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಆರ್‌ಎಸ್‌ಎಸ್, ಬಜರಂಗದಳ, ಹಿಂದೂ ಧರ್ಮದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ಆ ಶೆಟ್ಟರ್ ಅವರ ಸ್ವಾಭಿಮಾನವನ್ನು ನಾನು ನಿರೀಕ್ಷೆ ಮಾಡಿದ್ದೆ. ಅವರದ್ದು ನಿಜವಾದ ಸ್ವಾಭಿಮಾನಿಯೋ, ವೋಟಿಗೋಸ್ಕರ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಹೇಳಿದರು.

ADVERTISEMENT

‘ಬಜರಂಗದಳ ರಾಷ್ಟ್ರ, ಧರ್ಮ ರಕ್ಷಣೆ ಮಾಡುತ್ತಿದೆ. ಯಾವುದೇ ಸಾಮಾನ್ಯ ಜ್ಞಾನ ಇಲ್ಲದೆ ಕಾಂಗ್ರೆಸ್‌ನವರು ಪ್ರಣಾಳಿಕೆ ಸಿದ್ಧಪಡಿಸಿ, ಅದರಲ್ಲಿ ಬಜರಂಗದಳ ನಿಷೇಧದ ವಿಷಯ ಸೇರಿಸಿದ್ದಾರೆ. ಕಾಂಗ್ರೆಸ್‌ನವರು ಈ ಪ್ರಣಾಳಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

 ‘ಧರ್ಮ ರಕ್ಷಕರು, ಸಂಘಟನೆ ನಿಷೇಧಿಸುತ್ತೇವೆ ಎಂದರೆ ಅಂತಹ ನೂರು ಪ್ರಣಾಳಿಕೆಗಳನ್ನು ಬೇಕಾದರೂ ಸುಡುತ್ತೇನೆ. ಧರ್ಮ, ದೇಶ ಉಳಿಯಬೇಕು ಎಂಬುದು ನನ್ನ ಆಸೆ’ ಎಂದರು.

 ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಷಯವನ್ನು ಏಕೆ ಸೇರಿಸಿದರು, ಯಾರು ಇದರ ಹಿಂದೆ ಇದ್ದಾರೆ ಎಂಬ ಬಗ್ಗೆ ಅವರ ಪಕ್ಷದಲ್ಲೇ ಗೊಂದಲ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.