ಚಾಮರಾಜನಗರ: ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಮಾದಿಗ ಸಮುದಾಯವು ಅಸಮಾಧಾನ ವ್ಯಕ್ತಪಡಿಸಿದ್ದು, ಬಂಡಾಯವಾಗಿ ಸ್ಪರ್ಧಿಸುವಂತೆ ಶಿವಣ್ಣ ಅವರ ಮೇಲೆ ಒತ್ತಡ ಹಾಕಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಹಲವರು ಈ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ‘ಬಿಜೆಪಿಯಲ್ಲಿ ಸಮುದಾಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಟೆ ಶಿವಣ್ಣ ಅವರಿಗೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಟಿಕೆಟ್ ನೀಡಿಲ್ಲ. ಅದಕ್ಕಾಗಿ ಬಂಡಾಯವಾಗಿ ಸ್ಪರ್ಧೆ ಮಾಡಬೇಕು’ ಎಂದು ಹೇಳಿದರು.
ಕೋಟೆ ಎಂ.ಶಿವಣ್ಣ ಮಾತನಾಡಿ, ‘ಮಾದಿಗ ಸಮುದಾಯ ಪ್ರತಿ ಸಾರಿ ಬಿಜೆಪಿಗೆ ಮತ ಹಾಕುತ್ತಾ ಬಂದರೂ ಸಮುದಾಯವನ್ನು ಕಡೆಗಣಿಸುತ್ತಿರುವುದು ಸಮುದಾಯದವರಿಗೆ ಬಹಳ ನೋವುಂಟು ಮಾಡಿದೆ. ಯಾವ ಸಮುದಾಯಕ್ಕೆ ಮಾನ್ಯತೆ ಕೊಡಬೇಕಿತ್ತೋ ಅಂತಹ ಸಮುದಾಯಕ್ಕೆ ಮಾನ್ಯತೆ ಕೊಡುತ್ತಿಲ್ಲ. ಮತ ಕೊಡದ ಸಮುದಾಯಕ್ಕೆ ಮಣೆ ಹಾಕುತ್ತಿದೆ’ ಎಂದು ದೂರಿದರು.
‘ನೀವೆಲ್ಲರೂ ಅಭಿಪ್ರಾಯಗಳನ್ನು ಮುಂದಿಟ್ಟಿದ್ದೀರಿ. ಸಮುದಾಯದ ಮುಖಂಡರ ಅಭಿಪ್ರಾಯಗಳಿಗೆ ನಾನು ಬದ್ಧನಾಗಿದ್ದೇನೆ. ಎರಡು ದಿನ ಕಾಲಾವಕಾಶ ಕೊಡಿ. ಆ ಬಳಿಕ ನನ್ನ ನಿರ್ಧಾರ ತಿಳಿಸುವೆ’ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡ ಬಸವನಪುರ ರಾಜಶೇಖರ ಮಾತನಾಡಿ, ‘ಮಾದಿಗ ಸಮುದಾಯ ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕುವ ಮೂಲಕ ಬೆಂಬಲಿಸಿಕೊಂಡು ಬಂದಿದ್ದೇವೆ. ಕ್ಷೇತ್ರದಲ್ಲಿ ಮಾದಿಗ ಸಮುದಾಯದ 1.45 ಲಕ್ಷ ಮತಗಳಿದ್ದರೂ ಬಿಜೆಪಿ ಸಮುದಾಯವನ್ನು ಕಡೆಗಣಿಸಿದೆ. ಕೋಟೆ ಎಂ.ಶಿವಣ್ಣ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಿದೆ. ಪಕ್ಷವು ಅವರಿಗೆ ಉತ್ತಮ ಸ್ಥಾನಮಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕು, ಇಲ್ಲದಿದ್ದರೆ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಮುದಾಯ ಮುಖಂಡರು ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.
ವಕೀಲ ಸಿದ್ದೇಶ್, ಮೂಗೂರು ಸಿದ್ದರಾಜು, ನಾಗರಾಜು, ಶಿವಕುಮಾರ್, ಮಹದೇವಸ್ವಾಮಿ, ಡ್ಯಾನ್ಸ್ ಬಸವರಾಜು, ಪುಟ್ಟಲಿಂಗಯ್ಯ, ಲಿಂಗರಾಜು, ಬಿಳಿಯಪ್ಪ, ಮರಪ್ಪ, ಕಾಮಗೆರೆ ಮಹದೇವ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೂದಿತಿಟ್ಟು ನಾರಾಯಣ್, ಸದಸ್ಯ ಚಿಕ್ಕಸ್ವಾಮಿ, ಸುಂದರ್, ಸಿದ್ದಯ್ಯ, ಗುರುಲಿಂಗಯ್ಯ, ಶಿವಣ್ಣ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.