ADVERTISEMENT

ದಾವಣಗೆರೆ | ಲೋಕಸಭೆ ಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, ಬಿಜೆಪಿಗೆ ಒಳಬೇಗುದಿ

ಕಾಂಗ್ರೆಸ್‌, ಬಿಜೆಪಿ ಬಿರುಸಿನ ಪ್ರಚಾರ

ಚಂದ್ರಶೇಖರ ಆರ್‌.
Published 6 ಏಪ್ರಿಲ್ 2024, 7:20 IST
Last Updated 6 ಏಪ್ರಿಲ್ 2024, 7:20 IST
ಡಾ.ಪ್ರಭಾ ಮಲ್ಲಿಕಾರ್ಜುನ್
ಡಾ.ಪ್ರಭಾ ಮಲ್ಲಿಕಾರ್ಜುನ್   

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುತ್ತಿದ್ದರೆ, ಬಿಜೆಪಿಯಲ್ಲಿ ಒಳಬೇಗುದಿಯೇ ತಲೆನೋವಾಗಿದೆ. ಬಂಡಾಯ ಹಾಗೂ ಒಳಬೇಗುದಿ ಚುನಾವಣೆಯಲ್ಲಿ ಪರಿಣಾಮ ಬೀರುವ ದಟ್ಟ ಸಾಧ್ಯತೆ ಕಾಣುತ್ತಿದೆ.

ಲೋಕಸಭಾ ಚುನಾವಣೆಯ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಜಿ.ಬಿ. ವಿನಯಕುಮಾರ್‌ಗೆ ಪಕ್ಷ ಟಿಕೆಟ್‌ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪಣ ತೊಟ್ಟಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ಸ್ಪರ್ಧೆ ಖಚಿತ ಎಂದೇ ಹೇಳಿದ್ದಾರೆ. ಟಿಕೆಟ್‌ ಘೋಷಣೆಗೂ ಮುನ್ನವೇ ಹಳ್ಳಿ ಹಳ್ಳಿ ಸುತ್ತಿದ್ದ ವಿನಯಕುಮಾರ್ ಚುನಾವಣೆಯ ಸ್ಪರ್ಧಿಸಲು ವೇದಿಕೆ ಸಿದ್ಧಪಡಿಸಿದ್ದರು.

ADVERTISEMENT

ಬದಲಾದ ಸನ್ನಿವೇಶದಲ್ಲಿ ಟಿಕೆಟ್‌ ವಂಚಿತರಾಗಿರುವ ಅವರು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದಕ್ಕಾಗಿ  ಕಳೆದ 8 ದಿನಗಳಿಂದ ಕ್ಷೇತ್ರವ್ಯಾಪ್ತಿಯ 135 ಹಳ್ಳಿಗಳನ್ನು ಸುತ್ತಿದ್ದಾರೆ. ಈಗಾಗಲೇ ಹರಪನಹಳ್ಳಿ, ಜಗಳೂರು, ಹೊನ್ನಾಳಿ, ಚನ್ನಗಿರಿ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ.

‘ಹೈಕಮಾಂಡ್‌ ಮಟ್ಟದಲ್ಲೇ ನನ್ನ ಸ್ಪರ್ಧೆ ಬಗ್ಗೆ ಚರ್ಚೆಯಾಗಿತ್ತು. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಕಾರಣ ಕೊನೆಗಳಿಗೆಯಲ್ಲಿ ನನಗೆ ಟಿಕೆಟ್‌ ತಪ್ಪಿಸಿ, ಶಾಮನೂರು ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ನೀಡಲಾಗಿದೆ’ ಎಂದು ಆರೋಪ ಮಾಡುತ್ತಿರುವ ವಿನಯಕುಮಾರ್‌, ಹಿಂದುಳಿದ ವರ್ಗದ ಟ್ರಂಪ್‌ ಕಾರ್ಡ್‌ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ.

‘ಅಹಿಂದ ವರ್ಗವನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಈ ಮೂಲಕ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ನೋಡಿಕೊಳ್ಳಲಾಗಿದೆ’ ಎಂದು ಆರೋಪಿಸಿರುವ ಅವರು, ‘ನನ್ನದು ಸ್ವಾಭಿಮಾನದ ಹೋರಾಟ’ ಎನ್ನುತ್ತಿದ್ದಾರೆ.

ಒಂದು ವೇಳೆ ವಿನಯಕುಮಾರ್‌ ಸ್ಪರ್ಧಿಸಿದರೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್‌ ಆದ ಹಿಂದುಳಿದ ವರ್ಗಗಳ ಮತ ಒಡೆಯುವ ಲಕ್ಷಣಗಳಿವೆ. ಇದು ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿ, ಎದುರಾಳಿಗೆ ಲಾಭವಾಗುವ ಸಾಧ್ಯತೆಯೇ ಹೆಚ್ಚು. 

‘ಬಂಡಾಯ ಇಲ್ಲ. ಎಲ್ಲರೊಂದಿಗೆ ಸೇರಿ ಚುನಾವಣೆ ಎದುರಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರೂ ಅದು ಮೇಲ್ನೋಟಕ್ಕೆ ಎಂಬುದಂತೂ ಸ್ಪಷ್ಟ.

ಇತ್ತ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ನೇತೃತ್ವದ ಗುಂಪಿನ ಸಿಟ್ಟು ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡರೂ ಒಳಬೇಗುದಿ ಇದ್ದೇ ಇದೆ.

ರಾಜ್ಯಮಟ್ಟದಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಜಿಲ್ಲೆಯಲ್ಲೂ ಜೆಡಿಎಸ್‌ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದ್ದಾರೆ. ಆದರೆ, ಪಕ್ಷದ ಆಂತರಿಕ ಬಂಡಾಯ ಹೊಡೆತ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಗುರುಸಿದ್ದನಗೌಡ, ಎ.ಎಚ್. ಶಿವಯೋಗಿ ಸ್ವಾಮಿ, ಪ್ರಮುಖರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್, ಡಾ.ಟಿ.ಜಿ. ರವಿಕುಮಾರ್ ಸೇರಿದಂತೆ ಹಲವರ ಜತೆ ಮಾತುಕತೆ ನಡೆಸಿರುವ ಬಿಜೆಪಿ ವರಿಷ್ಠರು ಬಂಡಾಯ ಶಮನ ಮಾಡಿದ್ದಾರೆ. 

ಎಸ್‌.ಎ. ರವೀಂದ್ರನಾಥ್‌ ಅವರನ್ನೇ ವರಿಷ್ಠರು ಚುನಾವಣೆಯ ಸಾರಥಿಯನ್ನಾಗಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ರವೀಂದ್ರನಾಥ್‌ ಅಲ್ಲಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆದರೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಜಿಲ್ಲಾ ಚುನಾವಣಾ ಸಂಚಾಲಕರನ್ನಾಗಿ ನೇಮಿಸಲಾಗಿದ್ದರೂ ಅವರು ಇದುವರೆಗೂ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಅವರ ಬಂಡಾಯ ಶಮನವಾದಂತೆ ಕಾಣುತ್ತಿಲ್ಲ. 

ಮಾಡಾಳ್‌ ಮಲ್ಲಿಕಾರ್ಜುನ್‌, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್ ಅವರು ಆಗಾಗ ಬಿಜೆಪಿ ಪರ ಪ್ರಚಾರದಲ್ಲಿ ಕಾಣುತ್ತಿದ್ದಾರೆ. ಕೆಲವರು ಮಾತ್ರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಿದ್ದು, ಕೆಲವರು ಬಾರದಿರುವುದು ಒಳಬೇಗುದಿಯ ಹೊಡೆತ ತಟ್ಟಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗಾಯತ್ರಿ ಸಿದ್ದೇಶ್ವರ
ಜಿ.ಬಿ. ವಿನಯ್‌‌ಕುಮಾರ್‌
ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ. ಸದ್ಯ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ
-ಜಿ.ಬಿ. ವಿನಯಕುಮಾರ್‌ ಕಾಂಗ್ರೆಸ್‌ ಮುಖಂಡ
ಬಂಡಾಯ ಎದ್ದಿದ್ದ ಎಲ್ಲ ನಾಯಕರ ಮನವೊಲಿಸಲಾಗಿದೆ. ಎಲ್ಲ ನಾಯಕರು ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಬರುತ್ತಿದ್ದಾರೆ. ರೇಣುಕಾಚಾರ್ಯ ಅವರು ಕೌಟುಂಬಿಕ ಕಾರಣದಿಂದ ಪ್ರಚಾರದಲ್ಲಿ ಕಾಣುತ್ತಿಲ್ಲ. ಶೀಘ್ರ ಅವರು ಪ್ರಚಾರಕ್ಕೆ ಬರಲಿದ್ದಾರೆ.
-ರಾಜಶೇಖರ್ ನಾಗಪ್ಪ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ.
‘ಮನೆಯ ಅಣ್ಣತಮ್ಮಂದಿರ ಜಗಳ ಅಷ್ಟೇ ಸರಿಯಾಗಿದೆ’
‘ಎಲ್ಲೆಡೆ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಎಲ್ಲಾ ಮುಖಂಡರು ಬರುತ್ತಿದ್ದಾರೆ. ಸ್ಟಾರ್ ಪ್ರಚಾರಕರೂ ಬರಲಿದ್ದಾರೆ. ಬಂಡಾಯದ ಮಾತೇ ಇಲ್ಲ. ನಾವೆಲ್ಲ ಒಂದೇ ಮನೆಯ ಸದಸ್ಯರು. ಅಣ್ಣ–ತಮ್ಮಂದಿರಲ್ಲಿ ಮುನಿಸು ಸಹಜ. ಅದನ್ನು ಬಗೆಹರಿಸಿಕೊಂಡಿದ್ದೇವೆ. ಇದು ಒಂಥರಾ ಗಂಡ–ಹೆಂಡತಿ ಜಗಳದಂತೆ. ಸಣ್ಣ ಜಗಳಕ್ಕೆ ವಿವಾಹ ವಿಚ್ಛೇದನಕ್ಕೆ ಹೋಗುವುದಿಲ್ಲ. ಹಾಗೆಯೇ ಪಕ್ಷದಲ್ಲಿ ಅಸಮಾಧಾನ ಇದ್ದದ್ದು ಸಹಜ. ಅದು ಬಗೆಹರಿದಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.