ಬೆಂಗಳೂರು: ‘ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ’ ಎಂದು ಪ್ರಧಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ’ ಎನ್ನುವುದಕ್ಕೆ ನಿಮ್ಮಲ್ಲಿ ಆಧಾರ ಏನಿದೆ? ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ. ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ? ದಯವಿಟ್ಟು ತಿಳಿಸಿ. ಇಲ್ಲವೆಂದಾದರೆ, ಈ ಸುಳ್ಳು ಆರೋಪಕ್ಕೆ ಕನಿಷ್ಠ ವಿಷಾದವನ್ನಾದರೂ ವ್ಯಕ್ತಪಡಿಸಿ’ ಎಂದಿದ್ದಾರೆ.
‘ಸ್ಯಾಮ್ ಪಿತ್ರೋಡಾ ಅವರು ಈ ವಿಷಯ ಪ್ರಸ್ತಾಪಿಸಿರುವುದು, ಅವರ ವೈಯಕ್ತಿಕ ಅಭಿಪ್ರಾಯ. ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರು ಮಾಡಿರುವುದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. 2019ರ ಬಜೆಟ್‌ನಲ್ಲಿ ಇದನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಆ ಕಾಲದ ಪತ್ರಿಕೆಗಳ ವರದಿಗಳೇ ಸಾಕ್ಷಿ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಈಗ ನಿರ್ಮಲಾ ಸೀತಾರಾಮನ್ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ’ ಎಂದು ಮುಖ್ಯಮಂತ್ರಿ ಕೇಳಿದ್ದಾರೆ.
‘ಸಂಪತ್ತಿನ ಸಮಾನ ಹಂಚಿಕೆ ಎನ್ನವುದು ನಮ್ಮ ಸಂವಿಧಾನದ ಆಶಯವೂ ಆಗಿದೆ. ನಮ್ಮ ದೇಶದಲ್ಲಿ 1953ರಲ್ಲಿಯೇ ಎಸ್ಟೇಟ್ ತೆರಿಗೆ ಹೇರಲಾಗಿತ್ತು. ಅದನ್ನು ರದ್ದು ಮಾಡಿದವರು ರಾಜೀವ್ ಗಾಂಧಿ. 1998ರವರೆಗೆ ಚಾಲ್ತಿಯಲ್ಲಿದ್ದ ಗಿಫ್ಟ್ ತೆರಿಗೆಯನ್ನು ರದ್ದು ಮಾಡಿದವರು ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡರು. ಮೋದಿಯವರೇ ನಿಮ್ಮದೇ ಸರ್ಕಾರ 2015ರಲ್ಲಿ ಸಂಪತ್ತಿನ ಮೇಲಿನ ತೆರಿಗೆಯನ್ನೂ ರದ್ದು ಮಾಡಿದೆ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.