ಚಿಕ್ಕಬಳ್ಳಾಪುರ: ಹತ್ತು ವರ್ಷದ ಆಡಳಿತದಲ್ಲಿ ರಾಷ್ಟ್ರದ ಸಂಪತ್ತು ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ ಬೊಕ್ಕಸ ಬರಿದು ಮಾಡಿ 2014ರಲ್ಲಿ ನರೇಂದ್ರ ಮೋದಿ ಅವರ ಕೈಗೆ ಖಾಲಿ ಚೊಂಬು ಕೊಟ್ಟಿತ್ತು. ಮುಂದಿನ ಹತ್ತು ವರ್ಷಗಳಲ್ಲಿ ತಮ್ಮ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಖಾಲಿ ಚೊಂಬನ್ನು ತುಂಬಿ ಅಕ್ಷಯ ಪಾತ್ರೆ ಮಾಡಿದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ.
ಆ ಅಕ್ಷಯ ಪಾತ್ರೆ ಮೂಲಕ ಬಡವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಸಣ್ಣ ಸಮಾಜದವರನ್ನು ಮೇಲೆತ್ತಿದ ಮಹಾನುಭಾವ ನರೇಂದ್ರ ಮೋದಿ. ಇಂತಹವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಇದು ಕ್ಷುಲ್ಲಕ ರಾಜಕಾರಣ ಎಂದು ಕಿಡಿಕಾರಿದರು.
ತಾಲ್ಲೂಕಿನ ಚೊಕ್ಕಹಳ್ಳಿ ಬಳಿ ಶನಿವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರೀ ಚೊಂಬು ನೀಡಿತು ಎಂದು ಮುಖ್ಯಮಂತ್ರಿ ಜಾಹೀರಾತು ನೀಡಿದ್ದಾರೆ. ಆದರೆ, ಮೋದಿ ಕೈಗೆ ಚೊಂಬು ನೀಡಿದ್ದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದರು.
2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆ ಆಗಿದ್ದರು. ಆಗ ‘2ಜಿ’ ತರಂಗಾಂತರ ಹಗರಣ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣ ಸೇರಿದಂತೆ ಹಲವು ಹಗರಣಗಳ ಮೂಲಕ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ ನಡೆಸಿತು ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.