ADVERTISEMENT

ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುವೆ: ಜಿ.ಕುಮಾರ

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 12:12 IST
Last Updated 2 ಏಪ್ರಿಲ್ 2024, 12:12 IST
ಮಾನ್ವಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು
ಮಾನ್ವಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು   

ಮಾನ್ವಿ: ರಾಯಚೂರು ಜಿಲ್ಲೆ ನನ್ನ ಕರ್ಮ ಭೂಮಿ. ಸಂಸದನಾಗಿ ಆಯ್ಕೆಯಾದರೆ ಇಲ್ಲಿನ ಬೇಕು ಬೇಡಗಳನ್ನು ದಿಲ್ಲಿಯ ಆಡಳಿತಕ್ಕೆ ತಲುಪಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಹೇಳಿದರು.

ಮಂಗಳವಾರ ಪಟ್ಟಣದ ಭಾರತ ಜೋಡೊ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

’ದೇಶದಲ್ಲಿ ಹತ್ತು ವರ್ಷಗಳಿಂದ ಬಣ್ಣದ ಮಾತುಗಳ ಮೂಲಕ ಹೇಳಿದ್ದನ್ನೇ ಹೇಳಲಾಗುತ್ತಿದೆ. ಮಣಿಪುರದಲ್ಲಿ ನಡೆದ ದೌರ್ಜನ್ಯ ಘಟನೆಗಳು, ದೆಹಲಿಯ ಕೊರೆಯುವ ಚಳಿಯಲ್ಲಿ ವರ್ಷಗಟ್ಟಲೆ ರೈತರು ಧರಣಿ ನಡೆಸಬೇಕಾದ ಪರಿಸ್ಥಿತಿಗಳು ನನ್ನನ್ನು ರಾಜಕೀಯ ಸೇರಲು ಪ್ರಚೋದಿಸಿವೆ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ನಮ್ಮ ದೇಶದ ಮಹಾನ್ ಜನಶಕ್ತಿ. ಈ ಪಕ್ಷದ ಅಭ್ಯರ್ಥಿಯಾಗಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ’ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ಕುಮಾರ ನಾಯಕ ಅವರಿಗೆ ಈ ಭಾಗದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಇದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು' ಎಂದು ಕರೆ ನೀಡಿದರು.

ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ’ಪ್ರಧಾನಿ ಮೋದಿ ಶ್ರೀಮಂತರ ಪರ ಎಂಬುದು ಸಾಬೀತಾಗಿದೆ. ದೇಶದಲ್ಲಿ ಬಿಜೆಪಿ ಸೋಲಿಸದ ಹೊರತು ಬಡವರ ಏಳಿಗೆ ಅಸಾಧ್ಯ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ ಮಾತನಾಡಿ, ’ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಅಗತ್ಯ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ರಾಜಾ ವಸಂತ ನಾಯಕ, ಬಿ.ಕೆ.ಅಮರೇಶಪ್ಪ, ಖಾಲೀದ್ ಖಾದ್ರಿ, ಶರಣಯ್ಯ ಕೆ.ಗುಡದಿನ್ನಿ, ಕಿರಿಲಿಂಗಪ್ಪ ಕವಿತಾಳ, ಸಮದಾನಿ ನಾಯ್ಕ್, ಪಿ.ತಿಪ್ಪಣ್ಣ ಬಾಗಲವಾಡ, ಅಯ್ಯನಗೌಡ ಜಂಬಲದಿನ್ನಿ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ರೇಣುಕಾ ಸಿರವಾರ ಹಾಗೂ ಗುಂಡಮ್ಮ, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅದ್ದೂರಿ ಮೆರವಣಿಗೆ:

ಕಾರ್ಯಕ್ರಮಕ್ಕೆ ಮೊದಲು ಪಟ್ಟಣಕ್ಕೆ ಆಗಮಿಸಿದ ಅಭ್ಯರ್ಥಿ ಜಿ.ಕುಮಾರ ನಾಯಕ, ಸಚಿವ ಎನ್.ಎಸ್. ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಅವರನ್ನು ತೆರೆದ ವಾಹನದ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕೇಂದ್ರದ ಬಿಜೆಪಿ ಆಳ್ವಿಕೆಯಲ್ಲಿ ಅಂಬಾನಿ ಅದಾನಿಯಂತಹ ಶ್ರೀಮಂತರಿಗೆ ಲೂಟಿಕೋರರಿಗೆ ಅಚ್ಚೇ ದಿನ್ ಬಂದಿದೆ. ಎನ್.ಎಸ್.ಬೋಸರಾಜು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.