ADVERTISEMENT

ಸಿದ್ದರಾಮಯ್ಯ ಕುಟುಂಬಕ್ಕೆ ಮೋದಿ ಯಾವುದೇ ಸಹಾಯ ಮಾಡಿಲ್ಲ: ಯತೀಂದ್ರ

​ಪ್ರಜಾವಾಣಿ ವಾರ್ತೆ
Published 2 ಮೇ 2024, 13:57 IST
Last Updated 2 ಮೇ 2024, 13:57 IST
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ   

ಸಿಂಧನೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ವೈಯಕ್ತಿಕ ಲಾಭ ಆಗಿಲ್ಲ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಪುತ್ರ ರಾಕೇಶ್ ಮೃತಪಟ್ಟ ಸಂದರ್ಭದಲ್ಲಿ ಸಹಾಯ ಪಡೆದಿದ್ದಾರೆಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ’ ಎಂದರು.

ADVERTISEMENT

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಎದ್ದಿದೆ. ಎಲ್ಲಿಯೂ ಮೋದಿ ಕಾಣುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಂತುಷ್ಟರಾಗಿದ್ದಾರೆ. ರಾಜ್ಯದಲ್ಲಿ 15 ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಯತೀಂದ್ರ ವಿವರಿಸಿದರು.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಕೈಗೊಂಡ ಜನಪರ ಯೋಜನೆಗಳೇ ಕಾಂಗ್ರೆಸ್‍ಗೆ ಶ್ರೀರಕ್ಷೆಯಾಗಲಿವೆ. 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವೈಫಲ್ಯಗಳನ್ನು ಜನರು ಗಮನಿಸಿದ್ದಾರೆ. ಬರೀ ಸುಳ್ಳು ಹೇಳಿ 10 ವರ್ಷ ಆಡಳಿತ ಮಾಡಿದ ಪ್ರಧಾನಿಗೆ ತಕ್ಕಪಾಠ ಕಲಿಸಲಿದ್ದಾರೆ. ದೇಶದ ತುಂಬೆಲ್ಲಾ ದ್ವೇಷವನ್ನೇ ಬಿತ್ತಿರುವ ಬಿಜೆಪಿ ಸಚಿವರು, ಸಂಸದರು ಶಾಂತಿಯನ್ನು ಹಾಳು ಮಾಡಿದ್ದಾರೆ. ಅಭಿವೃದ್ಧಿ, ಬೆಲೆ ಏರಿಕೆ, ಹಣದುಬ್ಬರ, ರೂಪಾಯಿ ಮೌಲ್ಯ ಕುಸಿದಿರುವ ಸಂಗತಿಗಳು ಬಿಜೆಪಿಗರಿಗೆ ಚುನಾವಣೆ ವಿಷಯಗಳೇ ಆಗಿಲ್ಲ. ಬರೀ ಮುಸ್ಲಿಂ, ಹಿಂದೂ, ಮಾಂಗಲ್ಯ ಕಸಿಯುವದು, ಆಸ್ತಿ ಕಸಿದುಕೊಳ್ಳುವುದು, ಮಿಸಲಾತಿ ಕಸಿದುಕೊಳ್ಳುವ ದಾಖಲೆ ರಹಿತ ಮಾತುಗಳನ್ನು ಚುನಾವಣೆಯ ಚರ್ಚೆ ಮಾಡುತ್ತಿರುವದು ದುರ್ದೈವದ ಸಂಗತಿಯಾಗಿದೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಜ್ವಲ್ ಅವರ ವಾಹನ ಚಾಲಕ ಪೈನ್ ಡ್ರೈವ್ ಹಂಚಿರುವದಾಗಿ ಹೇಳಿರುವದರಿಂದ ಡಿ.ಕೆ.ಶಿವಕುಮಾರ ಅವರ ತಲೆಗೆ ಆರೋಪ ಕಟ್ಟುವುದು ಸರಿಯಲ್ಲ ಎಂದರು.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕುರುಬರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಈರಣ್ಣ, ಮುಖಂಡರಾದ ವೆಂಕಟೇಶರಾವ್ ಮಲ್ಲದಗುಡ್ಡ, ಶೇಖರಗೌಡ ದೇವರಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.