ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ಗಣಿನಾಡಿನಲ್ಲಿ ಗೆಲುವಿಗಾಗಿ ತಡಕಾಟ

ಆರ್. ಹರಿಶಂಕರ್
Published 30 ಏಪ್ರಿಲ್ 2024, 21:25 IST
Last Updated 30 ಏಪ್ರಿಲ್ 2024, 21:25 IST
<div class="paragraphs"><p> &nbsp;ಶ್ರೀರಾಮುಲು&nbsp;ಮತ್ತು ಇ. ತುಕಾರಾಮ್‌</p></div>

 ಶ್ರೀರಾಮುಲು ಮತ್ತು ಇ. ತುಕಾರಾಮ್‌

   

ಬಳ್ಳಾರಿ: ‘ವಿಧಾನಸಭಾ ಚುನಾವಣೆಯಲ್ಲಿ ಸೋತು ರಾಜಕೀಯ ಅಜ್ಞಾತವಾಸ ಅನುಭವಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯ ಪುನರ್ಜನ್ಮ ನೀಡಿ’ ಎಂಬುದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮನವಿ. ‘ನಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಗೆಲುವಿನ ಉಡುಗೊರೆ ಕೊಡಬೇಕಿದೆ. ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಾಮ್‌ ಅವರನ್ನೇ ಗೆಲ್ಲಿಸಿ’ ಎನ್ನುವುದು ಕಾಂಗ್ರೆಸ್‌ ಶಾಸಕರ ವಿನಂತಿ.

ರಾಜಕೀಯ ಪುನರ್ಜನ್ಮ ಮತ್ತು ಉಡುಗೊರೆಗಳ ಈ ಚರ್ಚೆಯಲ್ಲಿ ಕ್ಷೇತ್ರದ ಸಮಸ್ಯೆಗಳೇ ಮರೆಗೆ ಸರಿದಿವೆ. ಆದರೂ, ಕಾಂಗ್ರೆಸ್‌ಗೆ ಹೋದಲೆಲ್ಲ ‘ಜೀನ್ಸ್‌ ಪಾರ್ಕ್‌’ ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ. ‘ಈ 20 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ’ ಎಂಬ ಪ್ರಶ್ನೆ ಬಿಜೆಪಿ ಕಡೆಗೂ ತೂರಿ ಬರುತ್ತಿದೆ.    

ADVERTISEMENT

ಇದರ ಮಧ್ಯೆ, ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಧಾನ ಪಾತ್ರ ನಿರ್ವಹಿಸಬಲ್ಲ ಜಾತಿ ಓಲೈಕೆ ಕಸರತ್ತು ನಡೆದಿವೆ. ಬಿಜೆಪಿಯಿಂದ ವಾಲ್ಮೀಕಿ ಮತ್ತು ಲಿಂಗಾಯತ ಸಮುದಾಯದ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನಗಳೂ ಸಾಗಿವೆ. ಜತೆಗೆ, ಹಿಂದುತ್ವದ ಮತಗಳನ್ನು ಕ್ರೋಡೀಕರಿಸುವ ಕೆಲಸವೂ ನಡೆದಿದೆ.

ಬಿಜೆಪಿಯ ಪ್ರತಿಭಟನೆಗಳೇ ಜಾತ್ಯತೀತ ಮತಗಳನ್ನು ಕ್ರೋಡೀಕರಿಸಲಿವೆ ಎಂಬ ನಂಬಿಕೆ ಕಾಂಗ್ರೆಸ್‌ ನಾಯಕರಲ್ಲಿದೆ. ಲಿಂಗಾಯತ ಮತಗಳನ್ನು ಸೆಳೆಯಲು ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ಅಲ್ಲಂ ವೀರಭದ್ರಪ್ಪ ಅವರ ಪುತ್ರ ಅಲ್ಲಂ ಪ್ರಶಾಂತ್‌ ಅವರಿಗೆ ವಹಿಸಲಾಗಿದೆ.    

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಶೇ 18ರಿಂದ 20ರಷ್ಟು ಇರುವ ವಾಲ್ಮೀಕಿ ಸಮುದಾಯದ ವೋಟುಗಳು ಏನಾಗಬಹುದು ಎಂಬ ಕುತೂಹಲ ಈ ಬಾರಿ ಎಲ್ಲರಲ್ಲೂ ಮನೆ ಮಾಡಿದೆ. ಒಂದು ಕಾಲಕ್ಕೆ ಶ್ರೀರಾಮುಲು ವಾಲ್ಮೀಕಿ ಸಮುದಾಯದ ಮುಂಚೂಣಿ ನಾಯಕ ಎಂಬ ಭಾವನೆ ಇತ್ತು. ಆದರೆ, 10 ವರ್ಷಗಳಲ್ಲಿ ಸಚಿವ ಬಿ. ನಾಗೇಂದ್ರ ಈ ಸ್ಥಾನಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷ ಬಿಜೆಪಿಯಲ್ಲಿ ವಿಲೀನಗೊಂಡಿರುವುದು, ಮೋದಿ ಅಲೆ, ವಿಧಾನಸಭೆ ಚುನಾವಣೆ ಸೋತಿದ್ದರಿಂದ ವಾಲ್ಮೀಕಿ ಸಮುದಾಯದಲ್ಲಿ ತಮ್ಮ ಪರವಾಗಿ ಇರಬಹುದಾದ ಸಹಾನುಭೂತಿ, ಲಿಂಗಾಯತ ಮತಗಳು, ಹಿಂದುತ್ವ ತಮ್ಮನ್ನು ಗೆಲುವಿನ ದಡ ಸೇರಿಸಬಹುದು ಎಂದು ಶ್ರೀರಾಮುಲು ನಂಬಿದ್ದಾರೆ. ಆದರೆ, ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗಿಂತ 2.70 ಲಕ್ಷಕ್ಕೂ ಅಧಿಕ ಮತ ಪಡೆದಿತ್ತು. ಇದನ್ನು ಸರಿದೂಗಿಸಿ ಗೆಲ್ಲವುದು ಸವಾಲೇ ಸರಿ ಎಂಬುದು ಅವರಿಗೂ ಗೊತ್ತು.

ಗ್ಯಾರಂಟಿ ಯೋಜನೆಗಳು, ಜಾತ್ಯತೀತ ಮತಗಳು, ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕಾಂಗ್ರೆಸ್‌ ಶಾಸಕರು, ಸಚಿವರ ದಂಡು, ಸಿದ್ದರಾಮಯ್ಯ ಪ್ರಭಾವ ಪಕ್ಷದ ಕೈ ಹಿಡಿಯುತ್ತವೆ ಎಂದು ಕಾಂಗ್ರೆಸ್‌ ನಾಯಕರು ನಂಬಿದ್ದಾರೆ. ಆದರೆ, ಸಂಡೂರು ಕ್ಷೇತ್ರದಿಂದ ಆಚೆಗೆ ತುಕಾರಾಂ ಅಷ್ಟಾಗಿ ಪ್ರಭಾವಿಯಲ್ಲ ಎಂಬ ಕೊರಗು ಕಾಂಗ್ರೆಸ್‌ಗೆ ಕಾಡುತ್ತಿದೆ.   

ಬಳ್ಳಾರಿಯ ಹರಗಿನಡೋಣಿ ಗ್ರಾಮದಲ್ಲಿ ಮಕ್ಕಳು ಬಿಸಿಲನ್ನೂ ಲೆಕ್ಕಿಸದೇ ನೀರು ತರಲು ಬಂಡಿ ತಳ್ಳಿಕೊಂಡು ಹೊರಟಿರುವ ದೃಶ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.