ADVERTISEMENT

ಅಭ್ಯರ್ಥಿ ಪರ ಕೆಲಸ ಮಾಡಲ್ಲ: ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಾಜಿ ಶಾಸಕ ನಾಗರಾಜು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 9:29 IST
Last Updated 13 ಏಪ್ರಿಲ್ 2023, 9:29 IST
ಎಂ.ವಿ.ನಾಗರಾಜು
ಎಂ.ವಿ.ನಾಗರಾಜು   

ನೆಲಮಂಗಲ: ‘32 ವರ್ಷಗಳಿಂದ ಬಿಜೆಪಿ ಸಂಘಟನೆ ಮಾಡಿದ್ದೇನೆ. ಹಿಂದಿನಿಂದಲೂ ಬಿಜೆಪಿಗೆ ಕೆಲಸ ಮಾಡಿರುವ ನಾಲ್ವರು ಆಕಾಂಕ್ಷಿಗಳಿದ್ದರೂ ನೆಲಮಂಗಲ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಬಂದಂತಹ ಸಪ್ತಗಿರಿ ಶಂಕರ್‌ನಾಯಕ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದು, ಚುನಾವಣೆಯಲ್ಲಿ ಅವರ ಸೋಲು ಖಚಿತ’ ಎಂದು ಟಿಕೆಟ್‌ ಆಕಾಂಕ್ಷಿ ಮಾಜಿ ಶಾಸಕ ಎಂ.ವಿ.ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಬಿಜೆಪಿಗೆ ನಿಷ್ಠರಾಗಿರುತ್ತೇವೆ. ಆದರೆ ಸಪ್ತಗಿರಿ ಅವರ ಪರವಾಗಿ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು. ‘ನಮ್ಮವರೇ ಆದ ರಾಷ್ಟ್ರೀಯ ಪರಿಷತ್‌ ಸದಸ್ಯ ದೊಡ್ಡಬೆಲೆ ಸುಬ್ಬಣ್ಣ ಹಾಗೂ ಸಂಘ ಟನಾ ಕಾರ್ಯದರ್ಶಿ ಕಾಂತರಾಜು ಅವರು ಹೈಕಮಾಂಡ್‌ ದಾರಿ ತಪ್ಪಿಸಿದ್ದಾರೆ’ ಎಂದು ದೂರಿದರು.

‘ಚುನಾವಣೆಗಳು ಜಾತಿ ಆಧಾರದಲ್ಲಿ ನಡೆಯುತ್ತವೆ. ಸಪ್ತಗಿರಿ ಶಂಕರ್‌ನಾಯಕ್‌ ಅವರ ಲಂಬಾಣಿ ಸಮುದಾಯದವರು. ಇಲ್ಲಿ ಕೇವಲ 1200 ಮತಗಳಿವೆ. ನನ್ನ ಭೋವಿ ಸಮುದಾಯದ 18 ಸಾವಿರ ಮತಗಳಿವೆ. ಮತ್ತೊಬ್ಬ ಆಕಾಂಕ್ಷಿ ಬಿ.ಹೊಂಬಯ್ಯ ಅವರ ಬಲಗೈ ಸಮುದಾಯ ಸುಮಾರು 35ಸಾವಿರ ಮತಗಳಿವೆ. ವಕೀಲ ದೊಡ್ಡೇರಿ ವೆಂಕಟೇಶ್‌, ಎಂ.ಎನ್‌.ರಾಮು ಆಕಾಂಕ್ಷಿಗಳಾಗಿದ್ದರು. ನಮ್ಮಲ್ಲಿ ಯಾರಿಗೇ ಕೊಟ್ಟಿದ್ದರೂ ಬೇಸರವಾಗುತ್ತಿರಲಿಲ್ಲ. ಯಾವ ಮಾನದಂಡದ ಆಧಾರದ ಮೇಲೆ ಸಪ್ತಗಿರಿ ಅವರಿಗೆ ಟಿಕೆಟ್‌ ಕೊಟ್ಟಿದ್ದಾರೋ ಗೊತ್ತಿಲ್ಲ. ಹೀಗಾಗಿ, ನಾವು ಯಾರೂ ಅವರನ್ನು ಬೆಂಬಲಿಸುವುದಿಲ್ಲ’ ಎಂದರು.

ADVERTISEMENT

‘ಕಾಂಗ್ರೆಸ್‌ ಗೆಲುವು ಸುಲಭ ವಾಗಲಿ ಎಂದು ಬಿಜೆಪಿಗೆ ಇತ್ತೀಚೆಗೆ ಸೇರಿರುವ ಸಪ್ತಗಿರಿ ಶಂಕರ್‌ನಾಯಕ್‌ ಅವರಿಗೆ ಟಿಕೆಟ್‌ ಕೊಡಿಸಲಾಗಿದೆ. ಮತ್ತೊಮ್ಮೆ ಹೈಕಮಾಂಡ್‌ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗುರುವಾರ ಬೆಳಿಗ್ಗೆ ಬಸವಣ್ಣದೇವರ ಮಠದಲ್ಲಿ ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆದಿದ್ದು, ನಾವು ನಾಲ್ಕು ಜನರಲ್ಲೆ ಒಬ್ಬರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಿಜೆಪಿಯಲ್ಲೆ ಇರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.