ADVERTISEMENT

ಕಾಂಗ್ರೆಸ್‌ನಲ್ಲಿ ಹೊಸ ನೀರಿನ ಹೊಳೆ; ಹಿರಿಯರ ಎದುರು ಹೊಸ ಚಿಗುರು

ಕಾಂಗ್ರೆಸ್‌ನಲ್ಲಿ ಹೊಸ ನೀರಿನ ಹೊಳೆ; ರೋಚಕತೆಯತ್ತ ಜಿಲ್ಲೆಯ ರಾಜಕಾರಣ

ಸಂತೋಷ ಈ.ಚಿನಗುಡಿ
Published 22 ಮಾರ್ಚ್ 2024, 5:39 IST
Last Updated 22 ಮಾರ್ಚ್ 2024, 5:39 IST
ಪ್ರಿಯಾಂಕಾ ಜಾರಕಿಹೊಳಿ
ಪ್ರಿಯಾಂಕಾ ಜಾರಕಿಹೊಳಿ   

ಬೆಳಗಾವಿ: ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಕಳೆದ 15 ದಿನಗಳಿಂದ ತೀವ್ರ ಗುಮಾನಿಗೆ ಕಾರಣವಾಗಿದ್ದ ಟಿಕೆಟ್‌ ವಿಚಾರ ಈಗ ನಿರಾಳವಾಗಿದೆ. ಇಬ್ಬರೂ ಸಚಿವರ ಮಕ್ಕಳಿಗೇ ಟಿಕೆಟ್‌ ‘ಗ್ಯಾರಂಟಿ’ ಎಂದು ಕಾಂಗ್ರೆಸ್‌ ಘೋಷಿಸಿದೆ.

ತಂದೆ–ತಾಯಿ ಅಧಿಕಾರದಲ್ಲಿ ಇದ್ದಾಗಲೇ ಎಳೆ ವಯಸ್ಸಿನ ರಾಜಕಾರಣಿಗಳು ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ನಲ್ಲಿ ‘ಹೊಸ ನೀರಿನ’ ಹೊಳೆ ಹರಿಯಲಾರಂಭಿಸಿದೆ. ಎರಡೂ ಕ್ಷೇತ್ರಗಳಲ್ಲಿ ಹಿರಿಯರ ಎದುರು ಹೊಸ ಚಿಗುರು ಮೂಡಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್‌ಗೆ ಬೆಳಗಾವಿ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಅವರಿಗೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್‌ ಅಧಿಕೃತ ಘೋಷಣೆ ಮಾಡಲಾಗಿದೆ.

ADVERTISEMENT

ಕಳೆದೊಂದು ವಾರದಿಂದ ಇಬ್ಬರ ಹೆಸರೇ ಅಂತಿಮ ಎಂಬ ಸುದ್ದಿ ಪಕ್ಷದೊಳಗೆ ಓಡಾಡುತ್ತಲೇ ಇತ್ತು. ಆದರೆ, ಸಚಿವರಾಗಲೀ, ಅಭ್ಯರ್ಥಿಗಳಾಗಲೀ ಅಥವಾ ಪಕ್ಷದ ನಾಯಕರಾಗಲೀ ಬಹಿರಂಗವಾಗಿ ಹೇಳಿಕೆ ನೀಡಲು ಸಿದ್ಧರಿರಲಿಲ್ಲ. ಇದರಿಂದಾಗಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಗುಮಾನಿಗೆ ಒಳಗಾಗಿದ್ದರು.

‘ಯಾವುದೇ ಕಾರಣಕ್ಕೂ ಪ್ರಿಯಾಂಕಾ ಕಣಕ್ಕೆ ಇಳಿಯುವುದಿಲ್ಲ’ ಎಂದು ಪದೇಪದೇ ಕಡ್ಡಿ ಮುರಿದಂತೆ ಹೇಳುತ್ತಿದ್ದ ಸಚಿವ ಸತೀಶ ಜಾರಕಿಹೊಳಿ ಕೊನೆಗೂ ಮಾತು ಬದಲಿಸಿದ್ದಾರೆ.

ಮಣಾಲ್‌ ಸ್ಪರ್ಧಿಸಬೇಕು ಎಂಬ ಆಸಕ್ತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೊದಲಿನಿಂದಲೂ ಹೊಂದಿದ್ದರು. ಪಟ್ಟು ಸಡಿಲಿಸದೇ ಮಗನಿಗೆ ರಾಜಕೀಯ ಅವಕಾಶ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಪಕ್ಷದ ಹಿರಿಯರ ಅನಿಸಿಕೆ.

ಕಾರ್ಯಕರ್ತರಿಗೆ ಅನ್ಯಾಯ; ಆರೋಪ: ಬೆಳಗಾವಿ ಕ್ಷೇತ್ರದ ಟಿಕೆಟ್‌ ರೇಸ್‌ನಲ್ಲಿ ಡಾ.ಗಿರೀಶ ಸೋನವಾಲ್ಕರ್‌ ಮುಂಚೂಣಿಯಲ್ಲಿದ್ದರು. ಸಚಿವರೇ ಸ್ವತಃ ಚುನಾವಣೆಗೆ ಸಿದ್ಧಗೊಳ್ಳುವಂತೆ ಅವರಿಗೆ ತಿಳಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ನಿರಾಸೆ ಉಂಟಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಡಾ.ಗಿರೀಶ ಅವರು ಟಿಕೆಟ್‌ ಸಿಗುವ ಭರವಸೆಯಿಂದಲೇ ಕಾಂಗ್ರೆಸ್‌ ಪಾಳೆಯ ಸೇರಿದ್ದರು.

ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜಕ್ಕೆ ಆದ್ಯತೆ ನೀಡಲಾಗುವುದು ಎಂಬ ಮಾತು ದೊಡ್ಡ ಸದ್ದು ಮಾಡಿತ್ತು. ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರ ಹೆಸರನ್ನೂ ಹೈಕಮಾಂಡ್‌ಗೆ ಕಳಿಸಲಾಗಿತ್ತು.

ಸದ್ಯ ಚಿಂಗಳೆ ಅವರಿಗೆ ‘ಬುಡಾ’ ಅಧ್ಯಕ್ಷ ಸ್ಥಾನ ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಮುನಿಸಿಕೊಂಡಿದ್ದ ಇಬ್ಬರೂ ಜಿಲ್ಲಾಧ್ಯಕ್ಷರಿಗೆ ‘ಸಮಾಧಾನ’ ಮಾಡಿದ ಸಚಿವರು ತಮ್ಮ ಮಕ್ಕಳ ಹಾದಿ ಸುಗಮಗೊಳಿಸಿದ್ದಾರೆ.

ಮೃಣಾಲ್‌ ಹೆಬ್ಬಾಳಕರ
ಡಾ.ಅಂಜಲಿ ಹೇಮಂತ ನಿಂಬಾಳ್ಕರ್

Cut-off box - ಬಿಜೆಪಿಯ ಹಳಬರೂ ಕಾಂಗ್ರೆಸ್‌ನ ಹೊಸಬರೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕೆ ಇಳಿದಿದ್ದಾರೆ. ಎರಡನೇ ಅವಧಿಗೆ ಕಣಕ್ಕೆ ಇಳಿದ ಅವರು ಹಿರಿಯ ರಾಜಕಾರಣಿ. ಸಹಕಾರ ಉದ್ಯಮ ರಾಜಕೀಯ ಕ್ಷೇತ್ರಗಳಲ್ಲಿ ಪಳಗಿದ್ದಾರೆ. ಪತ್ನಿ ಶಶಿಕಲಾ ಜೊಲ್ಲೆ ಶಾಸಕಿಯಾಗಿ ಸಚಿವೆಯಾಗಿ ಮಾಡಿದ ಕೆಲಸಗಳೂ ಬೆನ್ನಿಗೆ ಇವೆ. ಈ ಹಿರಿಯ ರಾಜಕಾರಣಿ ಎದುರು ಈಗ 27 ವರ್ಷದ ಪ್ರಿಯಾಂಕಾ ಸ್ಪರ್ಧೆಗೆ ಇಳಿದಿದ್ದಾರೆ. ತಂದೆಯ ಕೆಲಸಗಳು ಕುಟುಂಬದ ಸಾಮರ್ಥ್ಯ ಹಾಗೂ ಅಹಿಂದ ಮತಗಳ ಭರವಸೆಯೇ ಅವರ ಈ ನಿರ್ಧಾರಕ್ಕೆ ಕಾರಣ ಎನ್ನುವುದು ಲೆಕ್ಕಾಚಾರ. ಇತ್ತ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೃಣಾಲ್‌ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಧುಮುಕಿದ್ದಾರೆ. 31 ವರ್ಷದ ಮೃಣಾಲ್‌ ಅವರು ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿರುದ್ಧ ತೊಡೆ ತಟ್ಟುವುದು ಬಹುತೇಕ ಖಾತ್ರಿಯಾಗಿದೆ. ಹೀಗೆ ಬಿಜೆಪಿಯ ಹಿರಿಯರ ಎದುರು ಕಾಂಗ್ರೆಸ್‌ನ ಯುವಜನರು ಏನೆಲ್ಲ ಕಸರತ್ತು ಮಾಡುತ್ತಾರೆ ಎಂಬುದೇ ರೋಚಕತೆಗೆ ಸಾಕ್ಷಿಯಾಗಿದೆ.

Cut-off box - ಫೀನಿಕ್ಸ್‌ನಂತೆ ಜಿಗಿದ ಡಾ.ಅಂಜಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಡಾ.ಅಂಜಲಿ ನಿಂಬಾಳಕರ ಮತ್ತೆ ಫೀನಿಕ್ಸ್‌ ಹಕ್ಕಿಯಂತೆ ಆಕಾಶಕ್ಕೆ ನೆಗೆದಿದ್ದಾರೆ. ಅಂಜಲಿ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂದು ಟೀಕಿಸಿದ ಬಾಯಿಗಳಿಗೆ ಬೀಗ ಹಾಕಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಅಂಜಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಹಲವು ಹಿರಿಯ ರಾಜಕಾರಣಿಗಳೂ ಪಟ್ಟು ಹಿಡಿದಿದ್ದರು. ಆದರೆ ಹೊರ ಜಿಲ್ಲೆಯವರಾದರೂ ಅಂಜಲಿ ಹೈಕಮಾಂಡ್‌ ಮುಂದೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳು ಉತ್ತರಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದರಿಂದ ಅಂಜಲಿ ಸ್ವಕ್ಷೇತ್ರದವರು ಎಂದೇ ಪರಿಗಣನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.