ಯಾದಗಿರಿ: ಯಾದಗಿರಿ ಮತಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಬುಧವಾರ ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಲು ತಹಶೀಲ್ದಾರ್ ಕಚೇರಿಗೆ ಮೆರವಣಿಗೆ ಮೂಲಕ ತೆರಳುತ್ತಿದ್ದಾರೆ.
ನಗರದ ಸುಭಾಷ ವೃತ್ತದಿಂದ ಆರಂಭವಾದ ಮೆರವಣೆಗೆ ಶಾಸ್ತ್ರಿ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತಲುಪಲಿದ್ದಾರೆ.
ಮತಕ್ಷೇತ್ರದ ವಿವಿಧ ಕಡೆಯಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ಕ್ರೂಸರ್, ಟಂಟಂ, ಕಾರು, ಬೈಕ್ ಗಳಲ್ಲಿ ಆಗಮಿಸಿದ ಅಭಿಮಾನಿಗಳು ಬಿಜೆಪಿ ಪರ ಘೋಷಣೆ ಕೂಗಿದರು.
ತಹಶೀಲ್ದಾರ್ ಕಚೇರಿ ಸಮೀಪ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಒಂದೆಡೆ ಬಿಸಿಲಿನ ಕಾವು ಹೆಚ್ಚಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸಿದ್ದಾರೆ. ಪುರುಷರಲ್ಲದೇ ಮಹಿಳೆಯರು ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
ಭರ್ಜರಿ ರೋಡ್ ಶೋ: ತೆರೆದ ವಾಹನದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಟೊಪ್ಪಿಗೆ, ಕೇಸರಿ ಶಾಲುಗಳನ್ನು ಹಾಕಿಕೊಂಡಿದ್ದಾರೆ.
ಟ್ರಾಫಿಕ್ ಜಾಂ: ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನರು ಆಗಮಿಸಿದ್ದು ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ತಹಶೀಲ್ದಾರ್ ಕಚೇರಿ ಸಮೀಪದ ಟ್ರಾಫಿಕ್ ಜಾಂ ಉಂಟಾಗಿತ್ತು. ಇದರಿಂದ ಸಾರ್ವಜನಿಕರು ಪರದಾಡಿದರು.
ಭಾವಚಿತ್ರ ಹಿಡಿದು ಸಂಭ್ರಮ: ಮೆರವಣಿಗೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಹಿಡಿದು ಕಾರ್ಯಕರ್ತರು ಸಂಭ್ರಮಿಸಿದರು.
ಸಂಚಾರ ಮಾರ್ಗ ಬದಲು: ಹಳೆ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್, ಲುಂಬಿನಿ ಗಾರ್ಡನ್ ನಿಂದ ಬಸ್ ನಿಲ್ದಾಣ, ಆರ್‌ಟಿಒ ಕ್ರಾಸ್, ಗ್ರಾಮೀಣ ಪೊಲೀಸ್ ಸ್ಟೇಷನ್, ಅಂಬೇಡ್ಕರ್ ವೃತ್ತ, ಲುಂಬಿನಿ ಗಾರ್ಡನ್, ಹೊಸಳ್ಳಿ ಕ್ರಾಸ್ ಬಸ್ ನಿಲ್ದಾಣ ಈ ಮುಖಾಂತರ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.